ಕಾಫಿ ತೋಟದಲ್ಲಿ ಕಡವೆಯನ್ನು ಬೇಟೆಯಾಡಿದ ಐವರ ಬಂಧನ

hunters arrested
Published on

ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕಡವೆಯೊಂದನ್ನು ಬೇಟೆಯಾಡಿದ ಐವರು ಆರೋಪಿಗಳನ್ನು ಬಂಧಿಸಿರುವ ಅರಣ್ಯ ಇಲಾಖೆ ಕಡವೆ ಮಾಂಸ, ಪಾತ್ರೆ, ಬೇಟೆಗೆ ಬಳಸಿದ ಕತ್ತಿಗಳನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದೆ. ತೋಟದ ರೈಟರ್ ಗಣೇಶ, ಹುಲುವತ್ತಿ ಗ್ರಾಮದ ಉಮೇಶ್, ಮೇಲಿನ ಹುಲುವತ್ತಿ ಗ್ರಾಮದ ಬಸವಯ್ಯ, ಕೃಷ್ಣಪ್ಪ ಹಾಗೂ ಕಲ್ಲೇಶ ಬಂಧಿತರು. ಆರೋಪಿಗಳು ಮುತ್ತೋಡಿ ಪ್ರಾದೇಶಿಕ ವಲಯ ಸಮೀಪದ ಮೇಲಿನ ಹುಲುವತ್ತಿ ಗ್ರಾಮದ ಕರೆಮನೆ ಮಂಜುನಾಥ್ ಗೌಡ ಎಂಬುವವರ ಕಾಫಿ ತೋಟದಲ್ಲಿ ಕಡವೆ ಬೇಟೆಯಾಡಿದ್ದು, ಈ ಮಾಹಿತಿ ಅರಿತ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭದ್ರಾ ವನ್ಯಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಯಶಸ್ ಒಡೆಯರ್ ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಕರೊನಾ ಹಿನ್ನೆಲೆಯಲ್ಲಿ ಜಾಮೀನು ದೊರೆತಿದೆ. ಡಿಸಿಎಫ್ ಎನ್.ಎಚ್.ಜಗನ್ನಾಥ್, ಎಸಿಎಫ್ ಮುದ್ದಣ್ಣ ನೇತೃತ್ವದಲ್ಲಿ ಆರ್ಎಫ್‍ಒ ಕಿರಣ್ ಕರ್ತಂಗಿ, ವನ್ಯಜೀವಿ ಪರಿಪಾಲಕ ಜಿ.ವೀರೇಶ್, ಡಿಆರ್ಎಫ್‍ಒಗಳಾದ ವಿಶ್ವನಾಥ್, ಯಾಸೀನ್, ನಾಗರಾಜ್, ಅರಣ್ಯ ರಕ್ಷಕರಾದ ಪ್ರವೀಣ್, ಮಲ್ಲಿಕಾರ್ಜುನ್, ವಾಹನ ಚಾಲಕರಾದ ಅಣ್ಣಪ್ಪ, ಅನ್ಸಾರ್, ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net