ಕಡಲೆಗೆ ಬೇಕು ಬೆಂಬಲ ಬೆಲೆ

10 lxr 3.a
Published on

ಮಲ್ಲು ಕಳಸಾಪುರ ಲಕ್ಷ್ಮೇಶ್ವರ

ಸರ್ಕಾರ ಈಗಾಗಲೇ ಶೇಂಗಾ, ಹತ್ತಿ, ಜೋಳ, ಭತ್ತ, ತೊಗರಿ ಬೆಳೆಗೆ ಬೆಂಬಲ ಬೆಲೆ ಘೊಷಿಸಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ಈ ಬಾರಿ ದಾಖಲೆಯ ಕಡಲೆ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಕಡಲೆಗೆ ಬೆಂಬಲ ಬೆಲೆ ಏಕಿಲ್ಲ ಎಂಬುದು ರೈತರ ಪ್ರಶ್ನೆಯಾಗಿದೆ.

ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ ನಂತರ ಬೆಂಬಲ ಬೆಲೆ ಘೊಷಿಸಿ ಖರೀದಿ ಕೇಂದ್ರ ಆರಂಭಿಸಿ ಮೂಗಿಗೆ ತುಪ್ಪ ಸವರುವುದು ವಾಡಿಕೆಯಂತಾಗಿದೆ. ಈಗ ಹಿಂಗಾರಿನ ಕಡಲೆ, ಕುಸುಬಿ, ಜೋಳ, ಸೂರ್ಯಕಾಂತಿ ಬೆಳೆಗಳು ಮಾರುಕಟ್ಟೆಗೆ ಬರುತ್ತಿವೆ. ರೈತರು ಬೆಂಬಲ ಬೆಲೆಯ ನಿರೀಕ್ಷೆಯಲ್ಲಿದ್ದಾರೆ. ಮುಖ್ಯವಾಗಿ ಕಡಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ್ದರಿಂದ ಸರ್ಕಾರ ಬೆಂಬಲ ಬೆಲೆ ಘೊಷಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿರುವ ರೈತರು ಬೆಳೆ ಕಟಾವಿಗೆ ಬಂದಿದ್ದರೂ ಹೊಲದಲ್ಲಿಯೇ ಬಿಟ್ಟಿದ್ದಾರೆ. ಇನ್ನು ಕೆಲವರು ಒಕ್ಕಲಿ ಮಾಡಿ ದಾಸ್ತಾನು ಮಾಡಿದ್ದಾರೆ.

ಆದರೆ, ಇದುವರೆಗೂ ಸರ್ಕಾರ ಬೆಂಬಲ ಬೆಲೆ ಫೋಷಣೆ ಮಾಡಲು ಮೀನಾಮೇಷ ಮಾಡುತ್ತಿರುವುದು ರೈತರ ಸಹನೆಯನ್ನು ಕೆಣಕುವಂತಿದೆ. ಈಗಾಗಲೇ ರೈತರು ಅಲ್ಲಲ್ಲಿ ಬೀದಿಗಿಳಿದು ಕಡಲೆಯನ್ನು ಬೆಂಬಲ ಬೆಲೆಯಡಿ ಖರೀದಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು.

ಲಕ್ಷ್ಮೇಶ್ವರ/ಶಿರಹಟ್ಟಿ ತಾಲೂಕಿನಲ್ಲಿ 11565 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಬಿತ್ತನೆಯಾಗಿರುವ ಕಡಲೆ ಈಗಾಗಲೇ ಮಾರುಕಟ್ಟೆ ಪ್ರವೇಶಿಸುತ್ತಿದೆ. ಈಗಾಗಲೇ ಲಕ್ಷ್ಮೇಶ್ವರ ಎಪಿಎಂಸಿಯಲ್ಲಿ 300 ಚೀಲ ಮಾರಾಟವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕಡಲೆಗೆ ಕೇವಲ 3,600 ರಿಂದ 3,900 ರೂ.ವರೆಗೆ ಮಾರಾಟವಾಗುತ್ತಿದೆ. ಸರಾಸರಿಯಾಗಿ ಪ್ರತಿ ಎಕರೆಗೆ ಕನಿಷ್ಠ 4 ಕ್ವಿಂಟಾಲ್ ಅಂದಾಜಿಸಿದರೆ ಒಟ್ಟು 1,15,650 ಕ್ವಿಂಟಾಲ್ ಕಡಲೆ ಮಾರುಕಟ್ಟಗೆ ಬರುವ ನಿರೀಕ್ಷೆಯಿದೆ. ಆದ್ದರಿಂದ ಸರ್ಕಾರ ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ಕೂಡಲೇ ಕಡಲೆಗೆ ಬೆಂಬಲ ಬೆಲೆ ಘೊಷಿಸಿ ಖರೀದಿ ಕೇಂದ್ರ ಸ್ಥಾಪನೆಗೆ ಮುಂದಾಗಬೇಕು.

ರೈತರ ಹೆಸರಿನಲ್ಲಿ ಹಸಿರು ಶಾಲು ಹೊತ್ತು ಪ್ರಮಾಣ ವಚನ ಸ್ವೀಕರಿಸುವ ಸರ್ಕಾರಗಳು ರೈತರ ಕೃಷಿ ಉತ್ಪನ್ನಗಳಿಗೆ ಕೇವಲ ವೈಜ್ಞಾನಿಕ ಬೆಲೆ ಘೊಷಿಸಿ ಪ್ರಚಾರ ಗಿಟ್ಟಿಸಿಕೊಂಡರೆ ಸಾಲದು. ಬದಲಾಗಿ ರೈತರ ಉತ್ಪನ್ನಗಳು ಮಾರುಕಟ್ಟೆಗೆ ಬರುವ ಪೂರ್ವದಲ್ಲಿಯೇ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಪ್ರಾರಂಭಗೊಂಡರೆ ಮಾತ್ರ ರೈತನ ಬಾಳು ಹಸನಾದೀತು.| ಮಹೇಶ ಹೊಗೆಸೊಪ್ಪಿನ, ರೈತ ಪರ ಹೋರಾಟ ವೇದಿಕೆ ಅಧ್ಯಕ್ಷ

ಕನಿಷ್ಠ 6000 ರೂ. ನೀಡಿ : ರೈತರು ಪ್ರತಿ ಎಕರೆ ಕಡಲೆಗೆ ಹತ್ತಾರು ಸಾವಿರ ರೂ. ಖರ್ಚು ಮಾಡಿದ್ದಾರೆ. ಸರ್ಕಾರಕ್ಕೆ ನಿಜವಾಗಿಯೂ ರೈತಪರ ಕಾಳಜಿ ಇದ್ದರೆ ಕೂಡಲೇ ಕಡಲೆ ಬೆಳೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಕ್ವಿಂಟಾಲ್​ಗೆ ಕನಿಷ್ಠ 6000 ರೂ. ಬೆಂಬಲ ಬೆಲೆ ಘೊಷಿಸಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತ ಮುಖಂಡ ಚಂದ್ರಶೇಖರ ಮೆಕ್ಕಿ, ಬಸವರಾಜ ಬೆಂಡಿಗೇರಿ, ವೀರಭದ್ರಪ್ಪ ಅಮರಪ್ಪನವರ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಟಾಸ್ಕ್​ಫೋರ್ಸ್ ಕಮಿಟಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಆದೇಶ ಬಂದರೆ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು.| ಡಿ.ಬಿ. ಡೊಕ್ಕಣ್ಣವರ, ಜಿಲ್ಲಾ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net