

ಲಕ್ಷೆ್ಮೕಶ್ವರ: ಕರೊನಾ ಭೀತಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಬೆಂಬಲ ಬೆಲೆಯ ಕಡಲೆ ಖರೀದಿ ಪ್ರಕ್ರಿಯೆಯನ್ನು ಏ. 6ರಿಂದ ಮತ್ತೆ ಪ್ರಾರಂಭಿಸಬೇಕು ಎಂದು ಸರ್ಕಾರ ಆದೇಶಿಸಿ 3 ದಿನ ಕಳೆದರೂ ಇದುವರೆಗೂ ತಾಲೂಕಿನ ಯಾವುದೇ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗದಿರುವುದು ಕಡಲೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ರೈತ ಸಮುದಾಯದ ಆಗ್ರಹದಿಂದ ಕಡಲೆಯನ್ನು 4,875 ರೂ. ಬೆಂಬಲ ಬೆಲೆಯಡಿ ಖರೀದಿಸಲು ಮಾ. 2ನೇ ವಾರದಲ್ಲಿ ಸೂಚಿಸಿತ್ತು. ಈ ಪ್ರಕ್ರಿಯೆ ಪ್ರಾರಂಭವಾಗುವ ಮೊದಲೇ ಕರೊನಾ ಭೀತಿ ಎದುರಾಗಿದ್ದರಿಂದ ಸರ್ಕಾರ ಏ. 5ರವರೆಗೆ ಖರೀದಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿತ್ತು. ಈಗ ಏ. 6ರಿಂದ ನೋಂದಣಿ ಮತ್ತು ಖರೀದಿ ಮರುಪ್ರಾರಂಭಿಸಬೇಕು ಎಂಬ ಸರ್ಕಾರದ ಆದೇಶ ಪಾಲನೆಯಾಗಿಲ್ಲ.
ಫೆಬ್ರವರಿಯಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಕಡಲೆ ಒಕ್ಕುವುದು ಮುಗಿದಿದೆ. 2 ತಿಂಗಳಿಂದ ರೈತರು ಕಡಲೆಯನ್ನು ಮನೆಯಲ್ಲಿ ರಕ್ಷಣೆ ಮಾಡಲು ಹೆಣಗಾಡುತ್ತಿದ್ದಾರೆ. ಇಲಿ, ಹೆಗ್ಗಣ, ನುಸಿ (ಬುರಬುರಿ)ಯಿಂದ ಜೋಪಾನ ಮಾಡಲಾಗದೆ ಕಡಲೆ ಹಾಳಾಗುವ ಭೀತಿಯಲ್ಲಿ ರೈತರು ಒದ್ದಾಡುತ್ತಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಕಡಲೆ ಬೆಲೆ 3,500ರಿಂದ 3,800 ರೂ.ವರೆಗೆ ಇದ್ದು, ಕಳೆದ 15 ದಿನಗಳಿಂದ ಎಪಿಎಂಸಿಯಲ್ಲಿಯೂ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಮಾರಾಟ ಮಹಾಮಂಡಳದವರು ನಿಗದಿಪಡಿಸಿದ ಖರೀದಿ ಕೇಂದ್ರದವರನ್ನು ಕೇಳಿದರೆ ನಮಗೆ ಖಾಲಿ ಚೀಲ ಬಂದಿಲ್ಲ, ನಾವು ಈಗ ಪಡಿತರ ವಿತರಿಸುತ್ತಿದ್ದೇವೆ. ಅದು ಮುಗಿದ ಮೇಲೆ ಪ್ರಾರಂಭಿಸುತ್ತೇವೆ. ಸಿದ್ಧತೆ ಮಾಡಿಕೊಳ್ಳಬೇಕು, ಸ್ಥಳಾವಕಾಶದ ಕೊರತೆ ಇದೆ, ಇನ್ನಷ್ಟು ದಿನ ಕಾಯಬೇಕು, ದಿನಕ್ಕೆ ಇಷ್ಟೇ ರೈತರ ಕಡಲೆ ಖರೀದಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತ ದಿನ ದೂಡುತ್ತಿದ್ದಾರೆಯೇ ಹೊರತು ಖರೀದಿ ಪ್ರಕ್ರಿಯೆ ಆರಂಭಿಸುತ್ತಿಲ್ಲ ಎಂಬುದು ರೈತರ ದೂರು.
ಕಡಲೆ ಬೆಳೆ ಒಕ್ಕಲು ಮಾಡಿ 2 ತಿಂಗಳು ಕಳೆದಿವೆ. ಮನೆಯಲ್ಲಿಯೇ ಕಡಲೆ ಹಾಳಾಗುತ್ತಿದೆ. ಕಡಲೆ ಮಾರಾಟದಿಂದ ಬರುವ ಹಣದಲ್ಲಿಯೇ ಮುಂಗಾರಿನ ಕೃಷಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಮಾಡಿದ ಸಾಲ ತೀರಿಸಬೇಕು. ಕೂಡಲೆ ಕಡಲೆ ಖರೀದಿಸಿ ಖಾತೆಗೆ ಹಣ ಜಮಾ ಮಾಡಬೇಕು.| ಬಸವರಾಜ ಬಾವಿಕಟ್ಟಿ ಕಡಲೆ ಬೆಳೆಗಾರ
ಸ್ಥಗಿತಗೊಂಡಿದ್ದ ಕಡಲೆ ಖರೀದಿ ಪ್ರಕ್ರಿಯೆಯನ್ನು ಸರ್ಕಾರದ ಆದೇಶದಂತೆ ಏ. 6ರಿಂದ ಮತ್ತೆ ಪ್ರಾರಂಭಿಸಲು ಸೂಚಿಸಲಾಗಿದೆ. ಈ ಆದೇಶ ಪಾಲಿಸದಿರುವ ಕೇಂದ್ರದವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಕೂಡಲೆ ಖರೀದಿ ಪ್ರಕ್ರಿಯೆ ಪ್ರಾರಂಭಿಸುವಂತೆ ಕ್ರಮ ಕೈಗೊಳ್ಳಲಾಗುವುದು.| ಡಿ.ಬಿ. ಡೊಕ್ಕಣ್ಣವರವ್ಯವಸ್ಥಾಪಕ, ಗದಗ ಜಿಲ್ಲಾ ಮಾರಾಟ ಮಾಹಾಮಂಡಳ