

ನರೇಗಲ್ಲ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಗುಣಮಟ್ಟದ ಕಡಲೆ (ಎಫ್ಎಕ್ಯೂ) ಖರೀದಿಸುವ ಪ್ರಕ್ರಿಯೆಯನ್ನು ಕಳೆದ ನಾಲ್ಕು ದಿನಗಳಿಂದ ಸ್ಥಗಿತಗೊಳಿಸಲಾಗಿದ್ದು, ನೋಂದಣಿ ಮಾಡಿಸಿದ ರೈತರು ಆತಂಕಕ್ಕೊಳಗಾಗಿದ್ದಾರೆ.
ರೈತರಿಂದ ಖರೀದಿಸಿದ ಕಡಲೆ ಸಂಗ್ರಹಕ್ಕೆ ಗೋದಾಮು ಇಲ್ಲದಿರುವ ಕಾರಣ ಖರೀದಿ ಸ್ಥಗಿತಗೊಳಿಸಲಾಗಿದೆ. ನರೇಗಲ್ಲ ಕಡಲೆ ಖರೀದಿ ಕೇಂದ್ರದಲ್ಲಿ ದಾಸ್ತಾನು ಸಂಗ್ರಹಿಸಲು ಸ್ಥಳಾವಕಾಶವಿಲ್ಲ. ಇಷ್ಟು ದಿನಗಳ ಕಾಲ ರೋಣ, ಗಜೇಂದ್ರಗಡದ ಗೋದಾಮುಗಳಿಗೆ ಪ್ರತಿನಿತ್ಯ ಖರೀದಿ ಮಾಡಿದ ಕಡಲೆ ದಾಸ್ತಾನು ಕಳುಹಿಸಲಾಗುತ್ತಿತ್ತು. ಸದ್ಯ ಆ ಗೋದಾಮುಗಳೂ ಭರ್ತಿಯಾಗಿದ್ದರಿಂದ ಸಮಸ್ಯೆ ಎದುರಾಗಿದೆ.
ನರೇಗಲ್ಲ ಜಕ್ಕಲಿ ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ರೋಣ ತಾಲೂಕು ಹುಟ್ಟುವಳಿ ಮಾರಾಟ ಸಹಕಾರಿ ಸಂಘದ(ಟಿಎಪಿಸಿಎಂಎಸ್) ವತಿಯಿಂದ ಮಾರ್ಚ್ 20ರಂದು 2019-20ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಕಡಲೆ ಕಾಳು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿಲಾಗಿತ್ತು. ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ನಂತೆ ಪ್ರತಿ ಕ್ವಿಂಟಾಲ್ಗೆ 4,875 ರೂ.ನಂತೆ ಖರೀದಿ ಪ್ರಾರಂಭಿಸಲಾಗಿತ್ತು. ಪಟ್ಟಣ ಹಾಗೂ ಕೋಡಿಕೊಪ್ಪ, ಕೋಚಲಾಪೂರ, ದ್ಯಾಂಪೂರ, ಮಲ್ಲಾಪೂರ, ತೋಟಗಂಟಿ ಸೇರಿ ಹಲವು ಗ್ರಾಮಗಳ ಸಾವಿರಕ್ಕೂ ಅಧಿಕ ರೈತರು ಖರೀದಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಶೇ. 50ರಷ್ಟು ರೈತರ ಕಡಲೆ ಖರೀದಿಯಾಗಿದ್ದು, ಇನ್ನುಳಿದ ರೈತರ ಕಡಲೆ ಖರೀದಿ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಗೋದಾಮು ಕೊರತೆಯ ಕಾರಣ ಹೇಳಿ ಖರೀದಿ ಸ್ಥಗಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸಹಕಾರ ಮಾರಾಟ ಮಹಾಮಂಡಳಿ ಈ ಹಿಂದಿನ ಕಡಲೆ ಆದೇಶವನ್ನು ಮಾರ್ಪಾಡು ಮಾಡಿದೆ. ರೈತರ ನೋಂದಣಿ ಅವಧಿಯನ್ನು ಮೇ 12 ಹಾಗೂ ಖರೀದಿ ಕಾಲಾವಧಿಯನ್ನು ಮೇ 25ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ನಿಂದ 15 ಕ್ವಿಂಟಾಲ್ವರೆಗೆ ಕಡಲೆ ಖರೀದಿಗೆ ಅನುಮತಿ ನೀಡಲಾಗಿದೆ.
ಕಡಲೆ ಕಾಪಾಡಿಕೊಳ್ಳುವ ಸವಾಲು: ಕಡಲೆ ಬೆಳೆ ರೈತರ ಕೈ ಸೇರಿ 6 ತಿಂಗಳು ಸಮೀಪಿಸುತ್ತಿದೆ. ಮನೆಯಲ್ಲಿ ಕಡಲೆಯನ್ನು ನುಸಿಗಳಿಂದ ರಕ್ಷಿಸುವುದು ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೇ ಔಷಧೋಪಚಾರ ಮಾಡಿದರೂ ಕಡಲೆಗೆ ನುಸಿ ಕಾಟ ತಪ್ಪುವುದಿಲ್ಲ. ಸರ್ಕಾರದ ಬೆಂಬಲ ಯೋಜನೆಯಡಿ ಮಾರಾಟ ಮಾಡೋಣ ಎಂದು ಕಾಯುತ್ತ ಕುಳಿತಿದ್ದ ರೈತರಿಗೆ ಈಗ ನಿರಾಸೆ ಎದುರಾಗಿದೆ.
ಮುಂಗಾರಿನ ತಯಾರಿಗೆ ಹೊಡೆತ: ಕಳೆದ ಒಂದು ತಿಂಗಳಿನಿಂದ ಆಗಾಗ ಮಳೆಯಾಗುತ್ತಿದ್ದು, ಮುಂಗಾರಿನ ಬಿತ್ತನೆಗಾಗಿ ಜಮೀನು ಹದಗೊಳಿಸಲು, ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ಕಡಲೆ ಮಾರಾಟ ಮಾಡಿದ ಹಣ ಕೈಸೇರಿದಲ್ಲಿ ಮಾತ್ರ ರೈತ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಕಡಲೆ ಖರೀದಿ ಪ್ರಕ್ರಿಯೆ ತಡವಾದಷ್ಟು ರೈತ ಸಮಸ್ಯೆಯ ಸುಳಿಗೆ ಸಿಲುಕಬೇಕಾಗುತ್ತದೆ.
ನರೇಗಲ್ಲ ಕಡಲೆ ಖರೀದಿ ಕೇಂದ್ರದಲ್ಲಿ ದಾಸ್ತಾನು ಸಂಗ್ರಹಿಸಲು ಸ್ಥಳಾವಕಾಶವಿಲ್ಲ. ಇಷ್ಟು ದಿನಗಳ ಕಾಲ ರೋಣ, ಗಜೇಂದ್ರಗಡದ ಗೋದಾಮುಗಳಿಗೆ ಪ್ರತಿನಿತ್ಯ ಖರೀದಿ ಮಾಡಿದ ಕಡಲೆ ದಾಸ್ತಾನು ಕಳುಹಿಸಲಾಗುತ್ತಿತ್ತು. ಆದರೆ, ಕಳೆದ ನಾಲ್ಕು ದಿನಗಳಿಂದ ಗೋದಾಮುಗಳು ಭರ್ತಿಯಾಗಿದ್ದು, ಕಡಲೆ ಖರೀದಿ ತಡೆ ಹಿಡಿಯುವಂತೆ ಸೂಚಿಸಿದ ಕಾರಣ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. | ಷಣ್ಮುಖಪ್ಪ ಸಿದ್ನೇಕೊಪ್ಪ , ವ್ಯವಸ್ಥಾಪಕರು, ಟಿಎಪಿಸಿಎಂಸ್ , ನರೇಗಲ್ಲ
ಸಾಕಷ್ಟು ತೊಂದರೆಗಳ ನಡುವೆ ಉತ್ತಮ ಕಡಲೆ ಬೆಳೆ ಬಂದಿದ್ದರೂ ಮಾರುಕಟ್ಟೆಯಲ್ಲಿ ಉತ್ತಮ ದರವಿಲ್ಲ. ಸರ್ಕಾರದ ಬೆಂಬಲ ಬೆಲೆಯಡಿ ಖರೀದಿ ನೀಡಲು ಚಾತಕ ಪಕ್ಷಿಯಂತೆ ಕಾಯ್ದು ಕುಳಿತಿದ್ದೇವೆ. ನಮ್ಮ ಪಾಳೆ ಇಂದು ಬರುತ್ತದೆ ನಾಳೆ ಬರುತ್ತದೆ ಎಂದು ಕಾಯುವುದೇ ಆಗಿದೆ. ನಮ್ಮ ಸರದಿ ಬರುವ ಲಕ್ಷಣ ಕಾಣುತ್ತಿಲ್ಲ. ಕಡಲೆ ಮಾರಾಟವಾಗಿ ನಮ್ಮ ಖಾತೆಗೆ ಹಣ ಜಮೆಯಾಗಲು ಇನ್ನೆಷ್ಟು ದಿನ ಕಾಯಬೇಕು ಎಂಬುದೇ ತಿಳಿಯದಾಗಿದೆ. ಜಿಲ್ಲಾಡಳಿತ ತಕ್ಷಣ ಕಡಲೆ ಖರೀದಿ ಪ್ರಾರಂಭಿಸಿ, ಆದಷ್ಟು ಬೇಗನೆ ರೈತರ ಖಾತೆಗೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು. | ಶರಣಪ್ಪ ಗಂಗರಗೊಂಡ ರೈತ, ನರೇಗಲ್ಲ