

ನೀಲಪ್ಪ ಹೆಗ್ಗಣ್ಣವರ ನವಲಗುಂದ
ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆಗಳು ಬಾರದೆ ಆರ್ಥಿಕ ಸಂಕಷ್ಟದಲ್ಲಿದ್ದ ರೈತರಿಗೆ ಈ ಬಾರಿ ಮುಂಗಾರಿನಲ್ಲಿ ಅತಿಯಾದ ಮಳೆ, ಬೆಣ್ಣೆಹಳ್ಳ ಪ್ರವಾಹದಿಂದ ತತ್ತರಿಸಿ ಹೋಗಿದ್ದರು. ಭೂಮಿಯಲ್ಲಿ ತೇವಾಂಶ ಹೆಚ್ಚಿನ ಪ್ರಮಾಣದಲ್ಲಿ ಇದ್ದುದರಿಂದ ಹಿಂಗಾರಿನಲ್ಲಾದರೂ ಬಂಪರ್ ಬೆಳೆ ತೆಗೆಯಬಹುದು ಎಂದುಕೊಂಡಿದ್ದರು. ಆದರೆ, ಈಗ ಕಡಲೆ, ಗೋಧಿ ಬೆಳೆಗಳಿಗೆ ತಗುಲಿದ ತುಕ್ಕು (ಬಂಡಾರ) ರೋಗ ಕಂಗಾಲು ಮಾಡಿದೆ.
ಮುಂಗಾರಿನಲ್ಲಿ ಹೆಸರು, ಹತ್ತಿ, ಗೋವಿನಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ ಮತ್ತಿತರ ಬೆಳೆಗಳು ಸತತವಾಗಿ ಸುರಿದ ಮಳೆ, ಪ್ರವಾಹದಿಂದ ಹಾಳಾಗಿದ್ದವು. ಆದರೆ, ರೈತರು ಹಾಗೂ ದನಕರುಗಳಿಗೆ ಇಡೀ ವರ್ಷ ಆಹಾರವಾಗಬೇಕಿದ್ದ ಹಿಂಗಾರಿನ ಗೋಧಿ, ಕಡಲೆ, ಜೋಳ ಮತ್ತಿತರ ಬೆಳೆಗಳು ತುಕ್ಕು ರೋಗ ಬಾಧೆಯಿಂದ ಒಣಗುತ್ತಿದೆ.
ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಹೆಚ್ಚು ಬೇಸಾಯ ಪ್ರದೇಶದಲ್ಲಿ ಕಡಲೆ, ಗೋಧಿ, ಜೋಳ ಬೆಳೆಯಲಾಗಿದೆ. ಆದರೆ, ಹವಾಮಾನ ವೈಪರೀತ್ಯ ಮತ್ತು ನಿಗದಿತ ಸಮಯದಲ್ಲಿ ಬಿತ್ತನೆ ಮಾಡದ ಕಾರಣ ಈ ಬೆಳೆಗಳಿಗೆ ತುಕ್ಕುರೋಗ ತಗುಲಿದೆ. ಜೋಳದ ಸುಳಿಯಲ್ಲಿರುವ ಕೀಟಗಳು ಬೆಳೆಯನ್ನು ತಿಂದು ಹಾಕುತ್ತಿವೆ. ಗೋಧಿ ಬೆಳೆಯಲ್ಲಿ ಕಂದು, ಕೆಂಪು, ಬಂಡಾರ ರೋಗ ಕಾಣಿಸಿದರೆ, ಕಡಲೆ ಬೆಳೆಯು ಬೇರು ಸಮೇತ ತುಕ್ಕು ರೋಗ ಬಾಧೆಯಿಂದ ಒಣಗುವ ಸ್ಥಿತಿಯಲ್ಲಿದೆ. ರೋಗ ನಿಯಂತ್ರಣಕ್ಕೆ ಕೆಲವು ರೈತರು ಸಾಕಷ್ಟು ಹಣ ವ್ಯಯಿಸಿ ರಾಸಾಯನಿಕ ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ.
ನಿಯಂತ್ರಣ ಹೇಗೆ?: ತುಕ್ಕು ರೋಗ ಹತೋಟಿಗೆ ಸಸ್ಯ ಸಂರಕ್ಷಣೆ ಕ್ರಮಕ್ಕಾಗಿ ಶೀಲಿಂದ್ರನಾಶಕಗಳಾದ ಹೆಗ್ಸಾಕೋನೊಸೊಲ್ ಅಥವಾ ಪೋ›ಫಿಕೋನೊಸೊಲ್ 1 ಮಿ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿ ಹೆಕ್ಟೇರ್ಗೆ 250ರಿಂದ 300 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು. 12 ದಿನಗಳ ಬಳಿಕ ಎರಡನೇ ಸಿಂಪರಣಾ ಕ್ರಮ ಅನುಸರಿಸಬೇಕು. ಮೊದಲಿನ ಶೀಲಿಂದ್ರನಾಶಕ ಬಿಟ್ಟು ಬೇರೆ ಶೀಲಿಂದ್ರನಾಶಕ ಬಳಸಿದರೆ ತುಕ್ಕುರೋಗ ಹತೋಟಿಗೆ ಬರಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಹವಾಮಾನ ವೈಪರೀತ್ಯ, ನಿಗದಿತ ಸಮಯದಲ್ಲಿ ಬಿತ್ತನೆ ಮಾಡದಿರುವುದರಿಂದ ಬೆಳೆಗಳಿಗೆ ತುಕ್ಕುರೋಗ ಬಾಧಿಸಲು ಕಾರಣವಾಗಿದೆ. ರೋಗ ಹತೋಟಿಗಾಗಿ ಶೀಲಿಂದ್ರನಾಶಕಗಳನ್ನು ಬಳಸಲು ತಾಲೂಕಿನ ಎಲ್ಲ ರೈತರಿಗೆ ಮಾಹಿತಿ, ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದ್ದೇವೆ. ಶೀಲಿಂದ್ರನಾಶಕಗಳಿಂದ ರೋಗ ನಿಯಂತ್ರಣ ಸಾಧ್ಯವಿದೆ. | ಎಂ.ಆರ್. ದಂಡಗಿ ಕೃಷಿ ಸಹಾಯಕ ನಿರ್ದೇಶಕ, ನವಲಗುಂದ
ಅತಿಯಾದ ಮಳೆಯಿಂದ ನಾಲ್ಕು ಎಕರೆಯಲ್ಲಿ ಬೆಳೆದ ಶೇಂಗಾ ಸಂಪೂರ್ಣ ಹಾಳಾಯಿತು. ಹಿಂಗಾರಿನಲ್ಲಿ ಬೆಳೆ ಚೆನ್ನಾಗಿ ಬರಬಹುದೆಂದುಕೊಂಡು 10 ಸಾವಿರ ರೂ. ವ್ಯಯಿಸಿ ಕಡಲೆ ಬಿತ್ತಿದ್ದೇವೆ. ಆದರೆ, ಕಡಲೆ ಬೆಳೆ ಜಟ್ಟಿ ಬಿಡುವ ಸಂದರ್ಭದಲ್ಲಿ ಸಂಪೂರ್ಣ ಬಂಡಾರ ರೋಗಕ್ಕೆ ತುತ್ತಾಗಿದ್ದು, ಇಳುವರಿ ಬರುವ ಲಕ್ಷಣಗಳಿಲ್ಲ. ಔಷಧ ಸಿಂಪಡಿಸಿದರೂ ತುಕ್ಕುರೋಗ ಹತೋಟಿಗೆ ಬಂದಿಲ್ಲ. ಶೇಂಗಾ, ಕಡಲೆ ಬೆಳೆ ನಷ್ಟದಿಂದ ಕಂಗಾಲಾಗಿದ್ದೇವೆ. ಸರ್ಕಾರ ರೈತರಿಗಾಗುವ ಬೆಳೆ ನಷ್ಟ ಭರಿಸಬೇಕು. | ಸೋಮಪ್ಪ ಮಲ್ಲಾಡಿ ರೈತ, ನವಲಗುಂದ