ಕಡಲೆ ಖರೀದಿ ಮಿತಿ ಹೆಚ್ಚಳ

h1- Kadale
Published on

ಹುಬ್ಬಳ್ಳಿ: ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಒಟ್ಟು 15 ಕ್ವಿಂಟಾಲ್ ಕಡಲೆಕಾಳು ಖರೀದಿಸಲು ಸರ್ಕಾರ ಮುಂದಾಗಿದೆ. ಈ ಮೊದಲು ಎಕರೆಗೆ ಮೂರು ಕ್ವಿಂಟಾಲ್​ನಂತೆ ಗರಿಷ್ಠ 10 ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತಿತ್ತು.

ಇದೀಗ ಅದನ್ನು ಪರಿಷ್ಕರಿಸಿ ಪ್ರತಿ ಎಕರೆಗೆ 5 ಕ್ವಿಂಟಾಲ್​ನಂತೆ ಗರಿಷ್ಠ 15 ಕ್ವಿಂಟಾಲ್ ಖರೀದಿಸಲಾಗುವುದು. ಈಗಾಗಲೇ ಬೆಂಬಲ ಬೆಲೆ ಯೋಜನೆಯಡಿ 10 ಕ್ವಿಂಟಾಲ್ ಕಡಲೆಕಾಳು ಕೊಟ್ಟವರು ಇನ್ನೂ ಐದು ಕ್ವಿಂಟಾಲ್ ಕೊಡಲು ಅವಕಾಶ ಇರುತ್ತದೆ.

ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರು 15 ಕ್ವಿಂಟಾಲ್​ವರೆಗೆ ಸೂಕ್ತ ದಾಖಲೆಗಳೊಂದಿಗೆ ಮಾರಾಟ ಮಾಡಬಹುದಾಗಿದೆ. ಇನ್ನೂ ನೋಂದಣಿ ಮಾಡಿರದಿದ್ದರೇ ಮೇ 12 ರವರೆಗೂ ನೋಂದಣಿಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್​ಗೆ 4875 ರೂ. ನಂತೆ ಗರಿಷ್ಠ 1,43,390 ಮೆಟ್ರಿಕ್ ಟನ್ ಎಫ್​ಎಕ್ಯೂ ಗುಣಮಟ್ಟದ ಕಡಲೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನಿರ್ಧರಿಸಿ ಅದರಂತೆ ಪ್ರಕ್ರಿಯೆ ಆರಂಭಿಸಲಾಗಿತ್ತು.

ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ, ಬಾಗಲಕೋಟೆ ಸೇರಿ 13 ಜಿಲ್ಲೆಗಳ ರೈತರಿಂದ ಕಡಲೆ ಖರೀದಿಸಲು ಅನುಮತಿ ನೀಡಲಾಗಿತ್ತು. ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಅಣ್ಣಿಗೇರಿ, ಮೊರಬ, ಕುಂದಗೋಳ ಸೇರಿ 13 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಆದರೆ, ಕರೊನಾ ಸೋಂಕು ಹಾಗೂ ಲಾಕ್​ಡೌನ್​ನಿಂದಾಗಿ ಕೇಂದ್ರ ಸರ್ಕಾರದ ಗುರಿ ಪೂರೈಸಲು ಕಷ್ಟಸಾಧ್ಯವಾಗಿರುವುದರಿಂದ ರೈತರಿಂದ ಹೆಚ್ಚುವರಿಯಾಗಿ 5 ಕ್ವಿಂಟಾಲ್ ಖರೀದಿಸಲು ಆದೇಶ ಹೊರಡಿಸಲಾಗಿದೆ.

ಮೇ 12ರ ವರೆಗೆ ರೈತ ನೋಂದಣಿ ಮಾಡಿಕೊಂಡು ಮೇ 25ರ ವರೆಗೆ ಕಡಲೆಕಾಳು ಖರೀದಿಗೆ ತರಬಹುದಾಗಿದ್ದು, ಅಲ್ಲಿಯವರೆಗೆ ಪ್ರಕ್ರಿಯೆ ನಡೆಸಲು ಅವಧಿ ವಿಸ್ತರಣೆ ಮಾಡಲಾಗಿದೆ. ಸದ್ಯ ಮುಕ್ತ ಮಾರುಕಟ್ಟೆಯಲ್ಲಿ ಕಡಲೆ ಬೆಲೆ ಕಡಿಮೆ ಇದೆ. ಗರಿಷ್ಠ ಕ್ವಿಂಟಾಲ್​ಗೆ 3500 ರೂ. ವರೆಗೆ ಮಾತ್ರ ಇದೆ. ರೈತ ಬೆಳೆಗಾರರು ಬೆಂಬಲ ಬೆಲೆ ಯೋಜನೆಯ ಪ್ರಯೋಜನ ಪಡೆಯಬೇಕು. ಬಿ.ಎಸ್. ಮಂಜುನಾಥ ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net