ಕಡಲೆ ಖರೀದಿ ಕೇಂದ್ರಕ್ಕೆ ಅಡ್ಡಿ ಬೇಡ

h1- Kadale
Published on

ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದನ್ನು ತಡೆಯಲು ಭಾರತ ಲಾಕ್​ಡೌನ್ ಆಗಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಬಿಟ್ಟರೆ ಉಳಿದೆಲ್ಲ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದೆ. ಈ ಮಧ್ಯೆ ಸರ್ಕಾರ ಬೆಂಬಲ ಬೆಲೆಯಡಿ ಕಡಲೆ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನ್ನದಾತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಕಡಲೆಕಾಳನ್ನು ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಇದೀಗ ಬೆಳೆ ರೈತನ ಕೈ ಸೇರುತ್ತಲೇ ಮಾರುಕಟ್ಟೆಯಲ್ಲಿ ಕಡಲೆ ದರ ಇಳಿಮುಖವಾಗಿದೆ. ಪ್ರತಿ ಕ್ವಿಂಟಾಲ್​ಗೆ ಹೆಚ್ಚೆಂದರೆ 3500 ರೂ. ನಿಗದಿಯಾಗಿದೆ. ಆ ಸಂದರ್ಭದಲ್ಲಿ ಸರ್ಕಾರ ಬೆಂಬಲ ಬೆಲೆಯಡಿ ಖರೀದಿಗೆ ಮುಂದಾಗಿದ್ದು, ಪ್ರತಿ ಕ್ವಿಂಟಾಲ್ ಕಡಲೆಯನ್ನು 4875 ರೂ. ನಂತೆ ಖರೀದಿಸುತ್ತಿದೆ.

ಈ ವರೆಗೆ 17768 ರೈತರು ಧಾರವಾಡ ಜಿಲ್ಲೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲ ಕಡಲೆಕಾಳು ತಂದು ಕೊಡಬೇಕು ಎನ್ನುವಷ್ಟರಲ್ಲಿ ಕರೊನಾ ಬಂದು ವಕ್ಕರಿಸಿದೆ. ಖರೀದಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 13 ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಅವೆಲ್ಲ ಈಗ ಬಂದ್ ಆಗಿವೆ.

ಧಾರವಾಡ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್​ಗೂ ಹೆಚ್ಚಿನ ಜಮೀನಿನಲ್ಲಿ ಕಡಲೆ ಬೆಳೆಯಲಾಗಿದೆ. ಈಗಾಗಲೇ ಹಲವು ರೈತರು ಹಣದ ಅಡಚಣೆಗಾಗಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿಯಾಗಿದೆ. ಬೆಂಬಲ ಬೆಲೆಯ ಲಾಭ ಪಡೆಯಲು ರೈತರು ಉಳಿಸಿಕೊಂಡಿರುವ ಕಡಲೆ ಖರೀದಿ ಪುನಾರಂಭ ಮಾಡಬೇಕಿದೆ.

ಹುಳು ಹಿಡಿಯುತ್ತಿವೆ: ಕಡಲೆಕಾಳು ಫಸಲು ಬಂದು ಆಗಲೇ ಒಂದು ತಿಂಗಳು ಆಗಿ ಹೋಗಿದೆ. ಅನೇಕ ರೈತರಿಗೆ ಸಂಗ್ರಹಿಸಿಟ್ಟುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಮಳೆಯೂ ಆಗಾಗ ಸುರಿದು ಸಂಕಷ್ಟಕ್ಕೆ ದೂಡುತ್ತಿದೆ. ಕಡಲೆ ಹಾಗೇ ಹೆಚ್ಚು ದಿನ ಇಟ್ಟರೆ ಹುಳು ಹತ್ತುವ ಅಪಾಯ ಇದೆ. ಒಂದು ವೇಳೆ ಸರ್ಕಾರ ಖರೀದಿ ಆರಂಭಿಸಿ ಗೋದಾಮುಗಳಲ್ಲಿ ಸಂಗ್ರಹಿಸಿದರೆ ರಾಸಾಯನಿಕ ಬಳಸಿ ಹುಳು ಆಗದಂತೆ ತಡೆಯಬಹುದಾಗಿದೆ.

ಯಾವುದೇ ದಟ್ಟಣೆ ಇಲ್ಲದಂತೆ ಕಡಲೆ ಖರೀದಿ ಪ್ರಕ್ರಿಯೆ ನಡೆಸಬಹುದು. ದಿನಕ್ಕೆ ಎಂಟರಿಂದ ಹತ್ತು ರೈತರನ್ನು ಮಾತ್ರ ಕರೆದರೆ ಒಬ್ಬೊಬ್ಬರಾಗಿ ಬಂದು ತೂಕ ಮಾಡಿಸುತ್ತಾರೆ. ಈ ಬಗ್ಗೆ ಜಿಲ್ಲಾಡಳಿತ ಆಲೋಚನೆ ಮಾಡಬೇಕು ಎಂದು ಕೋಳಿವಾಡದ ರೈತ ಮುಖಂಡ ಸುಭಾಸ ಬೂದಿಹಾಳ ಮನವಿ ಮಾಡಿದ್ದಾರೆ.

ರೈತರು ಬೆಳೆದ ಕಡಲೆಕಾಳು ಸೇರಿ ಎಲ್ಲ ಬೆಳೆಗಳನ್ನು ಎಪಿಎಂಸಿಗೆ ತಂದು ಮಾರಾಟ ಮಾಡಲು ಅವಕಾಶ ನೀಡಬೇಕು. ಕಡಲೆ ಬೆಳೆಗಾರರ ನೋಂದಣಿ ಮುಗಿದಿದ್ದು, ಖರೀದಿಗೆ ತರುವವರಷ್ಟೇ ಬರುವುದರಿಂದ ದಟ್ಟಣೆಯಾಗುವುದಿಲ್ಲ. ಖರೀದಿ ಕೇಂದ್ರಗಳಲ್ಲಿ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಂಡು ಖರೀದಿ ಪ್ರಕ್ರಿಯೆಗೆ ಅವಕಾಶ ನೀಡುವ ಬಗ್ಗೆ ಜಿಲ್ಲಾಡಳಿತ ಚಿಂತಿಸಬೇಕು. | ಸುರೇಶ ಕಿರೇಸೂರ, ಎಪಿಎಂಸಿ ಸದಸ್ಯ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net