ಕಡಲೆ ಖರೀದಿ ಕೇಂದ್ರ ಪುನಾರಂಭ

11srt-1
Published on

ಶಿರಹಟ್ಟಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬೆಂಬಲ ಬೆಲೆಯ ಕಡಲೆ ಖರೀದಿ ಕೇಂದ್ರ ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೇಂದ್ರದಲ್ಲಿ ಶುಕ್ರವಾರದಿಂದ ಪುನಾರಂಭಗೊಂಡಿದೆ.

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ರೈತ ಸಮುದಾಯದ ಆಗ್ರಹದಿಂದ ಕಡಲೆಯನ್ನು ಪ್ರತಿ ಕ್ವಿಂಟಾಲ್ ಗೆ 4,875 ರೂ. ದರ ನಿಗದಿಪಡಿಸಿ ಬೆಂಬಲ ಬೆಲೆಯಲ್ಲಿ ಖರೀದಿಸಲು ಮಾ.2ನೇ ವಾರದಲ್ಲಿ ಸೂಚಿಸಿತ್ತು. ಆದರೆ, ಪ್ರಕ್ರಿಯೆ ಪ್ರಾರಂಭದ ಬೆನ್ನೆಲ್ಲೇ ಕರೊನಾ ಭೀತಿ ಎದುರಾದ ಪರಿಣಾಮ ಸರ್ಕಾರ ಸೂಚನೆ ನೀಡುವವರೆಗೆ ಖರೀದಿಗೆ ತಾತ್ಕಾಲಿಕ ತಡೆ ನೀಡಿತ್ತು. ಕೊನೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಬೇಗುದಿ ಹಾಗೂ ಕರೊನಾ ಕರಿನೆರಳಿನ ಪ್ರಭಾವದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರ ನೆರವಿಗೆ ಬರುವುದರ ಮೂಲಕ ಸರ್ಕಾರ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿಗೆ ಆದೇಶ ನೀಡಿದ್ದರಿಂದ ರೈತ ಸಮುದಾಯದಲ್ಲಿನ ಆತಂಕ ದೂರಾಗಿದೆ.

ಕಳೆದೊಂದು ತಿಂಗಳ ಹಿಂದೆ ಶಾಸಕರು ಚಾಲನೆ ನೀಡಿದ್ದ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿನ ಖರೀದಿ ಕೇಂದ್ರ ಶುಕ್ರವಾರದಿಂದ ಪುನಾರಂಭಗೊಂಡಿದೆ. ರೈತರು ಟ್ರ್ಯಾಕ್ಟರ್, ಟಂಟಂ ವಾಹನಗಳ ಮೂಲಕ ಕಡಲೆ ತರುತ್ತಿದ್ದಾರೆ. ಸರ್ಕಾರದ ಆದೇಶದಂತೆ 4875 ರೂ.ಗೆ ಕ್ವಿಂಟಾಲ್​ನಂತೆ ಪ್ರತಿಯೊಬ್ಬ ರೈತನಿಂದ 10 ಕ್ವಿಂಟಾಲ್ ಕಡಲೆ ಖರೀದಿ ಮಾಡಲಾಗುತ್ತಿದೆ.

ಕಳೆದ ತಿಂಗಳು ಖರೀದಿ ಕೇಂದ್ರ ಆರಂಭವಾದಂತೆ ಇಲ್ಲಿಯವರೆಗೆ 187 ರೈತರು ಹೆಸರು ನೋಂದಾಯಿಸಿದ್ದಾರೆ. ಕಳೆದೆರಡು ದಿನದಿಂದ 24 ಜನ ರೈತರು ಮಾರಾಟ ಮಾಡಿದ್ದು ಉಳಿದಂತೆ ಮೇ. 12 ರವರೆಗೆ ನೋಂದಣಿ ಮತ್ತು ಖರೀದಿಗೆ ಅವಕಾಶ ನೀಡಲಾಗಿದೆ.| ಶಿವಣ್ಣ ಅಡರಕಟ್ಟಿ, ವ್ಯವಸ್ಥಾಪಕ ಪ್ರಾ.ಕೃ.ಪ.ಸ.ಸಂ. ಶಿರಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net