ಕಡಲೆ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹಿಸಿ ಧರಣಿ

4ang1
Published on

ಅಣ್ಣಿಗೇರಿ: ತಾಲೂಕಿನಾದ್ಯಂತ ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆಗೆ ಸರ್ಕಾರ ಕೂಡಲೆ ಸೂಕ್ತ ಬೆಲೆ ನಿಗದಿಪಡಿಸಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಆಗ್ರಹಿಸಿದರು.

ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ಅವರು ಮಾತನಾಡಿದರು.

ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಹಾನಿ ಅನುಭವಿಸಿದ ರೈತರಿಗೆ, ಮನೆಗಳು ಹಾನಿಯಾದ ಜನರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಸದಸ್ಯ ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಬೆಳೆಗಳಿಗೆ ಸೂಕ್ತ ಬೆಲೆ ನೀಡಿ ಖರೀದಿಸಬೇಕು ಎಂದರು.

ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂಜುನಾಥ ಮಾಯಣ್ಣವರ ಮಾತನಾಡಿ, ರೈತರ ಹಾಗೂ ಪಟ್ಟಣದ ವಿವಿಧ ಬೇಡಿಕೆಗಳನ್ನು ವಾರದೊಳಗೆ ಸರ್ಕಾರ ಈಡೇರಿಸದಿದ್ದರೆ ನವಲಗುಂದ, ಅಣ್ಣಿಗೇರಿ ತಾಲೂಕಿನ ರೈತರಿಂದ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೊಟ್ರೇಶ ಗಾಳಿ ಅವರು, ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಧರಣಿ ಹಿಂಪಡೆದರು. ಶಿವಣ್ಣ ಬಾಳೋಜಿ, ಬಸವರಾಜ ಕುಬಸದ, ಪ್ರವೀಣ ನಾವಳ್ಳಿ, ವಾಸುದೇವ ಬಿರಸಲ, ಪ್ರಕಾಶ ಅಂಗಡಿ, ಬಾಬಾಜಾನ್ ಮುಧೋಳ, ಚಂಬಣ್ಣ ಹಾಳದೋಟರ, ಶಾಕೀರ ಸನದಿ, ಈಶ್ವರ ಕಾಳಪ್ಪನವರ, ಹುಸೇನಸಾಬ್ ಬೆಟಗೇರಿ, ವೀರನಾರಾಯಣ ಬೆಂತೂರ, ಮುತ್ತು ದ್ಯಾವನೂರ, ಹಸನಸಾಬ್ ಘೂಡುನಾಯ್ಕರ, ಭಗವಂತಪ್ಪ ಪುಟ್ಟಣ್ಣವರ, ಶಂಕ್ರು ಕುರಿ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net