ಕಡಲಿಗಿಳಿಯದ ನಾಡ ದೋಣಿಗಳು

20ankola1a
Published on

ಅಂಕೋಲಾ: ಒಂದೆಡೆ ಮತ್ಸ್ಯ ಕ್ಷಾಮ, ಇನ್ನೊಂದೆಡೆ ಕಾರವಾರದಲ್ಲಿ ಸಾಗರಮಾಲಾ ಯೋಜನೆ ವಿರೋಧಿಸಿ ಮೀನುಗಾರರು ಹೋರಾಟ ನಡೆಸುತ್ತಿದ್ದಾರೆ. ಇವುಗಳ ನಡುವೆ ಅಸಾಂಪ್ರದಾಯಿಕ ಮೀನುಗಾರಿಕೆ(ಲೈಟ್ ಫಿಶ್ಶಿಂಗ್)ಯಿಂದಾಗಿ ಸಾವಿರಾರು ನಾಡ ದೋಣಿಗಳು ಕಡಲಿಗಿಳಿಯದ ಪರಿಸ್ಥಿತಿ ನಿರ್ವಣವಾಗಿದೆ.

ಈ ಹಿಂದೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದರು. ಆದರೆ, ದುಡ್ಡಿನ ವ್ಯಾಮೋಹಕ್ಕೆ ಒಳಗಾಗಿ ಕೆಲವರು ಅಸಾಂಪ್ರದಾಯಿಕ ಮೀನುಗಾರಿಕೆಗೆ ಇಳಿದಿದ್ದಾರೆ. ಇದರಿಂದ ನಾಡ ದೋಣಿಗಳಿಗೆ ಮೀನುಗಳೇ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಮೀನುಗಾರರು ದೂರುತ್ತಿದ್ದಾರೆ.

ಅಂಕೋಲಾ ಕಡಲ ಕಿನಾರೆ 16 ಕಿ.ಮೀ. ಇದ್ದು ಅಂದಾಜು 30 ಸಾವಿರ ಮೀನುಗಾರರು ವಾಸವಾಗಿದ್ದಾರೆ. ಇವರಲ್ಲಿ ಹೆಚ್ಚಿನ ಜನರು ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ನಂಬಿದ್ದಾರೆ. ಯಾಂತ್ರೀಕೃತ 544 ದೋಣಿ ಹಾಗೂ ಸಾಂಪ್ರದಾಯಿಕ ಕೈ ದೋಣಿಗಳಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ. ಒಂದೆಡೆ ಕಾಡುತ್ತಿರುವ ಮತ್ಸ್ಯ ಕ್ಷಾಮ, ಇನ್ನೊಂದೆಡೆ ಅವ್ಯಾಹತವಾಗಿ ಸಾಗುತ್ತಿರುವ ಲೈಟ್ ಫಿಶ್ಶಿಂಗ್ ಮೀನುಗಾರರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೇಂದ್ರ ಸರ್ಕಾರ ವಿಧಿಸಿರುವ ಷರತ್ತಿನನ್ವಯ 12 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಮಾಡಬಾರದೆಂಬ ನಿಯಮವಿದೆ. ಅಲ್ಲದೆ, ಮೀನು ಹಿಡಿಯಲು 45 ಎಂ.ಎಂ ಬಲೆ ಬಳಸುವಂತಿಲ್ಲ ಹಾಗೂ 25 ಕೆ.ವಿ. ಗಿಂತಲೂ ಅಧಿಕ ಸಾಮರ್ಥ್ಯದ ಜನರೇಟರ್ ಉಪಯೋಗಿಸುವಂತಿಲ್ಲ. ಆದರೆ, ಕಣ್ಣು ಕೊರೈಸುವ ಎಲ್​ಇಡಿ ಮೇಲ್ಮೈ ಬೆಳಕು, ಕಡಲ ಆಳದಲ್ಲಿ ಇನ್ನೊಂದು ಎಲ್​ಇಡಿ ಹಾಕಲಾಗುತ್ತದೆ. ಈ ಬೆಳಕಿಗೆ ದೂರದ ಮೀನುಗಳು ಕೂಡ ಒಂದೆಡೆ ಬರುತ್ತವೆ. ಈ ಬೆಳಕಿನಿಂದಾಗಿ ದೊಡ್ಡ ಮೀನುಗಳು ಬಲೆಗೆ ಬಿದ್ದರೆ, ಮರಿಗಳು ಸಾವನ್ನಪ್ಪುತ್ತಿರುವುದು ಕಂಡುಬರುತ್ತಿದೆ. ಈ ಕುರಿತು ಮೀನುಗಾರರು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ರೂಪಾಲಿ ನಾಯ್ಕ ಅವರಿಗೂ ಮನವಿ ಸಲ್ಲಿಸಿ ವಾಸ್ತವಾಂಶ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net