ಕಡಪಲಕೆರೆಯಲ್ಲಿಲ್ಲ ಕನಿಷ್ಠ ಸೌಲಭ್ಯ: ಸ್ವಾತಂತ್ರ ಬಂದಾಗಿನಿಂದಲೂ ಕಂಡಿಲ್ಲ ಸಾರಿಗೆ ಸಂಪರ್ಕ

PVG_SL1
Published on

ಚಿತ್ತಗಾನಹಳ್ಳಿ ಚಂದ್ರು ಪಾವಗಡ

ಪಾವಗಡ ತಾಲೂಕಿನ ಕಡಪಲಕೆರೆ ಸ್ವಾತಂತ್ರ ಬಂದಾಗಿನಿಂದಲೂ ಸಾರಿಗೆ ಸಂಪರ್ಕ ಕಂಡಿಲ್ಲ, 1200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕುಗ್ರಾಮದಲ್ಲಿ ಮೂಲಸೌಲಭ್ಯ ಮರೀಚಿಕೆಯಾಗಿದೆ.

ಸಾರಿಗೆ ಸಂಪರ್ಕ ಇಲ್ಲದೆ ಮಕ್ಕಳು ಶಾಲೆ, ಕಾಲೇಜಿಗೆ ಹೋಗಲು ಪರದಾಡುವ ಸ್ಥಿತಿ ಇದೆ. *** 100ಕ್ಕೂ ಹೆಚ್ಚು ಕುಟುಂಬಗಳಿಗೆ ಕನಿಷ್ಠ ಸೂರಿನ ಸೌಲಭ್ಯ ಕೂಡ ಗ್ರಾಮದಲ್ಲಿಲ್ಲ.

ಸರ್ಕಾರದ ಪಡಿತರ ನಂಬಿ ಬದುಕುತ್ತಿರುವ ಬಹುತೇಕ ಕುಟುಂಬಗಳು ಕುರಿ, ಮೇಕೆ ಹಾಗೂ ಜಾನುವಾರು ಸಾಕಣೆಯನ್ನು ಪ್ರಮುಖ ಕಸುಬು ಮಾಡಿಕೊಂಡಿದ್ದು, ಜೀವನ ನಿರ್ವಹಣೆಗೂ ಪರದಾಡುವ ಸ್ಥಿತಿಯಿದೆ.

ಸಾಕಷ್ಟು ಕುಟುಂಬಗಳಲ್ಲಿ ದುಡಿಯುವ ಮಕ್ಕಳೆಲ್ಲ ಗಾರ್ಮೆಂಟ್ಸ್​ ಹಾಗೂ ಸೆಕ್ಯೂರಿಟಿ ಗಾರ್ಡ್​ ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗಿದ್ದು ಊರಿನಲ್ಲಿ ವೃದ್ಧರ ಜತೆಗೆ ಮಕ್ಕಳೇ ಇದ್ದಾರೆ. ಜನರಿಲ್ಲದ ಊರೀಗ ವೃದ್ಧಾಶ್ರಮದ ಸ್ವರೂಪ ಪಡೆದಿದೆ.

ಅಲ್ಪಸ್ವಲ್ಪ ಜಮೀನು ಹೊಂದಿರುವ ರೈತರು ತರಕಾರಿ, ಹೂವು ಬೆಳೆದು ಸ್ವಾವಲಂಬಿಗಳಾಗಿದ್ದಾರೆ. ಉಳಿದವರು ಇವರ ಜಮೀನಿನಲ್ಲಿ ಕೂಲಿಗಾಗಿ ದುಡಿಯುತ್ತಿದ್ದಾರೆ. ಸರ್ಕಾರಿ ಸೌಲಭ್ಯವನ್ನೇ ಪಡೆಯದ ಇಲ್ಲಿನ ರೈತರನ್ನು ನೋಡಿದರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಗ್ರಾಮ ನೋಡಿರುವ ಸಾಧ್ಯತೆ ಕಡಿಮೆ ಎನಿಸುತ್ತಿದೆ.

ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಿದ್ದು, ಇರುವ 5 ಕೊಠಡಿಗಳಲ್ಲಿ 4 ಶಿಥಿಲವಾಗಿವೆ. ಹತ್ತು ವರ್ಷಗಳಿಂದ ಮುರುಕು ಕಟ್ಟಡದಲ್ಲಿಯೇ 25 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 7ನೇ ತರಗತಿವರೆಗೂ ಮಕ್ಕಳಿದ್ದರೂ ಸೂಕ್ತ ಶೌಚಗೃಹದ ವ್ಯವಸ್ಥೆ ಇಲ್ಲ.

ಗ್ರಾಮದಲ್ಲಿ ಒಂದಿಬ್ಬರು ಕಾಲೇಜು ಮೆಟ್ಟಿಲು ತುಳಿದು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ತಾಲೂಕು ಕೇಂದ್ರದಿಂದ 7ಕಿಮೀ ದೂರದಲ್ಲಿರುವ ಈ ಕುಗ್ರಾಮ ಎಲ್ಲ ವ್ಯವಹಾರಗಳಿಗೆ ಪಾವಗಡವನ್ನೇ ಅವಲಂಭಿಸಿದೆ.

ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಉಪಕೇಂದ್ರ ಇದ್ದರೂ ಯಾವುದೇ ಸಿಬ್ಬಂದಿ ಸಂಪರ್ಕಕ್ಕೆ ಸಿಗದೆ ಹಾಗೂ ಗ್ರಾಮದಲ್ಲಿ ವಾಸವಿಲ್ಲದ ಕಾರಣ ವೃದ್ಧರು ಬಾಣಂತಿಯರು, ಅಂಗವಿಕಲರು ಅನಾರೋಗ್ಯಕ್ಕೆ ತುತ್ತಾದ ಗ್ರಾಮದ ಎಲ್ಲ ಜನರು ಪರದಾಡುವ ಪರಿಸ್ಥಿತಿಯಿದೆ. ಗ್ರಾಮದಲ್ಲಿ ಇನ್ನೂ ಕೆಲ ಮನೆಗಳಿಗೆ ವಿದ್ಯುತ್​ ಸಂಪರ್ಕವೇ ಇಲ್ಲ.

ಹೂವು ಬೆಳೆಗಾರರಿಗೆ ಮೋಸ: ಗ್ರಾಮದಲ್ಲಿ ಹೂವು ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದ್ದರೂ ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆಯಿಲ್ಲ. ರೈತರು ಖಾಸಗಿ ಮಂಡಿಗಳಿಗೆ ತೆಗೆದುಕೊಂಡು ಹೋಗುತ್ತಿದ್ದು ಕಮಿಷನ್​ ಆಸೆಗೆ ರೈತರಿಗೆ ಸದಾ ವಂಚನೆ ನಡೆಯುತ್ತಿದೆ.

ಶೇ.10 ಕಮಿಷನ್​ ಪಡೆಯುವ ದಲ್ಲಾಳಿ ನಿಗದಿ ಮಾಡಿದ ಬೆಲೆಗೆ ರೈತರು ಹೂವು ಮಾರಾಟ ಮಾಡುವ ದುಸ್ಥಿತಿ ಇದೆ. ಮಂಡಿಗಳ ವರ್ತಕರು ಸಮಯಕ್ಕೆ ಸರಿಯಾಗಿ ರೈತರಿಗೆ ವಂಚಿಸಿರುವ ಪ್ರಕರಣಗಳು ಪದೇಪದೇ ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಪೊಲೀಸ್​ ಠಾಣೆಗೆ ಬಂದ ದೂರುಗಳು ಏಕಪಕ್ಷೀಯ ರಾಜಿ, ಪಂಚಾಯಿತಿಯಲ್ಲಿ ಮುಗಿದು ರೈತರಿಗೆ ಅನ್ಯಾಯವಾದ ಉದಾಹರಣೆ ಸಾಕಷ್ಟಿದೆ.

ಆಶ್ರಯವಿಲ್ಲದ ಬುಡಬುಡಿಕೆ ಕುಟುಂಬಗಳು: ಕಡಪಲಕೆರೆಯಲ್ಲಿ ಅಲೆಮಾರಿ ಸಮುದಾಯದ 8 ಬುಡಬುಡಿಕೆ ಕುಟುಂಬಗಳಿದ್ದು, ಆಶ್ರಯ, ಅನ್ನಕ್ಕಾಗಿ ಪರದಾಡುತ್ತಿವೆ. ಅಲೆಮಾರಿ ಬದುಕು ಬಿಟ್ಟು ಒಂದೆಡೆ ನೆಲೆ ನಿಂತರೂ ಸರ್ಕಾರಿ ದಾಖಲೆಗಳಲ್ಲಿ ಸ್ಥಾನ ಪಡೆದಿಲ್ಲ. ವಸತಿಗಳಿಲ್ಲದೆ ಇಂದಿಗೂ ಗುಡಿಸಲಿನಲ್ಲಿ ಜೀವನ ದೂಡುತ್ತಿದ್ದಾರೆ. ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಸೌಕರ್ಯ ಈ ಬಡ ಕುಟುಂಬಗಳ ಪಾಲಿಗಿಲ್ಲದಂತಾಗಿದೆ.

ಗ್ರಾಮದಲ್ಲಿ ಬಡ ಕುಟುಂಬಗಳೇ ಹೆಚ್ಚಾಗಿದ್ದರೂ ಸರ್ಕಾರ ಕನಿಷ್ಠ ಮೂಲಸೌಕರ್ಯ ಒದಗಿಸುವ ಮನಸ್ಸು ಮಾಡಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ಪೂರಕ ವಾತಾವರಣವಿಲ್ಲ. ಶಾಲೆ ಕಟ್ಟಡ ಕೂಡ ಶಿಥಿಲವಾಗಿದ್ದು, ಹೊಸ ಕಟ್ಟಡ ಜತೆಗೆ ಕಾಂಪೌಂಡ್​ ಅಗತ್ಯವಿದೆ. ರಸ್ತೆ, ಚರಂಡಿ ಹಾಗೂ ವಿದ್ಯುತ್​ ಸಂಪರ್ಕಕ್ಕಾಗಿ ಬಹುದಿನದಿಂದ ಬೇಡಿಕೆ ಸಲ್ಲಿಸುತ್ತಲೇ ಇದ್ದೇವೆ. > ಹನುಮಂತರಾಯಪ್ಪ, ಕಡಪಲಕೆರೆ ಗ್ರಾಮದ ಅಭಿವೃದ್ಧಿಗೆ ಸ್ಥಳಿಯ ಗ್ರಾಮ ವಿಶೇಷ ಆಸಕ್ತಿ ವಹಿಸಬೇಕಿದೆ, ಗ್ರಾಪಂ ಅಧಿಕಾರಿಗಳಿಗೆ ಗ್ರಾಮಕ್ಕೆ ಭೇಟಿ ನೀಡುವುದು ಅಪರೂಪ. ಮೇಲಧಿಕಾರಿಗಳು ಗಮನ ನೀಡಿ ಕನಿಷ್ಠ ಮೂಲಸೌಕರ್ಯ ಒದಗಿಸಲು ಕ್ರಮಕೈಗೊಳ್ಳಬೇಕು. > ಪಿ.ನರಸಿಂಹಪ್ಪ, ಕಡಪಲಕೆರೆ ವಾಸಿ.

ಗ್ರಾಮಕ್ಕೆ ಆಗಬೇಕಾದದ್ದೇನು? *100ಕ್ಕೂ ಹೆಚ್ಚು ಕುಟುಂಬಗಳಿಗೆ ಕನಿಷ್ಠ ಸೂರಿನ ಸೌಲಭ್ಯ *ರಸ್ತೆ ಸಾರಿಗೆ ವ್ಯವಸ್ಥೆ *ಶಾಲೆಗೆ ಶೌಚಗೃಹ *ಸಮರ್ಪಕ ವಿದ್ಯುತ್​ *ನೂತನ ಶಾಲಾ ಕಟ್ಟಡ *ಸ್ಥಳಿಯವಾಗಿ ಉದ್ಯೋಗ ಸೃಷ್ಟಿ *ಒಳ ಚರಂಡಿ ವ್ಯವಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net