ಕಡತ ವಿಲೇವಾರಿಗೆ ಒತ್ತು ಕೊಡಿ

dc visit
Published on

ಹುಮನಾಬಾದ್: ಸಾರ್ವಜನಿಕರು ಕಚೇರಿಗೆ ಸಲ್ಲಿಸುವ ಪ್ರತಿಯೊಂದು ಕಡತ ಕಾಲಮಿತಿಯೊಳಗೆ ವಿಲೇವಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಯಾವ ಕಾರಣಕ್ಕೂ ಅನಗತ್ಯ ಕಡತ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಸೂಚಿಸಿದರು.

ಸೋಮವಾರ ತಾಲೂಕಿನಲ್ಲಿ ವಿವಿಧೆಡೆ ಪ್ರವಾಸ ಕೈಗೊಂಡರು. ನಂತರ ಪಟ್ಟಣದ ತಹಸಿಲ್ ಕಚೇರಿಗೆ ಭೇಟಿ ನೀಡಿ ಮಾತನಾಡಿ, ಜನರು ಎಂದರೆ ಸರ್ಕಾರ. ನಾವು ಜನರ ಸೇವಕರು. ಇದನ್ನು ಅರಿತು ನಾವು ಪ್ರಾಮಾಣಿಕವಾಗಿ ಕಚೇರಿಯಲ್ಲಿ ಕೆಲಸ ಮಾಡಬೇಕು ಎಂದರು.

ಸರ್ಕಾರದಿಂದ ನಾನಾ ಸೌಲಭ್ಯ ಕೋರಿ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಹಾಗು ಸಿಬ್ಬಂದಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಬೇಕು. ಜನರ ಅಹವಾಲು ತಾಳ್ಮೆಯಿಂದ ಆಲಿಸಬೇಕು ಎಂದು ಸಲಹೆ ಮಾಡಿದರು.

ತಹಸಿಲ್ ಕಚೇರಿಯ ನಾನಾ ಶಾಖೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಆಯಾ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮಾತನಾಡಿಸಿ ಅವರ ಕಾರ್ಯವೈಖರಿ ಬಗ್ಗೆ ತಿಳಿದುಕೊಂಡರು. ತಹಸಿಲ್ ಕಚೇರಿ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಂಚರಿಸಿ, ಕಟ್ಟಡವನ್ನು ಸದಾಕಾಲ ಶುಚಿಯಾಗಿಟ್ಟುಕೊಳ್ಳಬೇಕು. ತಾವು ಕುಳಿತುಕೊಳ್ಳುವ ಆಯಾ ಕಡೆಗಳಲ್ಲಿ ಕಡತಗಳನ್ನು ಶಿಸ್ತಿನಿಂದ ಇಡಬೇಕು ಎಂದು ಕಚೇರಿಯಲ್ಲಿದ್ದ ಎಲ್ಲ ಸಿಬ್ಬಂದಿಗೆ ಸಲಹೆ ಮಾಡಿದರು.

ಶಾಸಕ ರಾಜಶೇಖರ ಪಾಟೀಲ್ ಅವರು ವಿಶೇಷ ಪ್ರಯತ್ನ ವಹಿಸಿ, ಕೆಕೆಆರ್ಡಿಬಿ ಅನುದಾನದಿಂದ ತಹಸಿಲ್ ಕಚೇರಿಯ ಮುಂದೆ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿದ್ದ ರಸ್ತೆಯನ್ನು ನೋಡಿ ಡಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ತಹಸೀಲ್ದಾರ್ ನಾಗಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net