

ಮೈಸೂರು: ಪಾಲಿಕೆ ವಲಯ 7 ಮತ್ತು 9ರ ಕಚೇರಿಗಳಿಗೆ ಗುರುವಾರ ಮೇಯರ್ ಶಿವಕುಮಾರ್ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಸಾರ್ವಜನಿಕರು ಕೊಟ್ಟಿರುವ ಅರ್ಜಿಗಳನ್ನು ವಿಲೇವಾರಿ ಮಾಡದೆ ಎರಡು-ಮೂರು ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಅವರು, ಒಂದು ವಾರದೊಳಗೆ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು. ಸಾರ್ವಜನಿಕರಿಂದ ಅಹವಾಲು ಆಲಿಸಿ ಕಡತಗಳನ್ನು ಪರಿಶೀಲಿಸುವ ಮೂಲಕ ತರಾಟೆಗೆ ತಗೆದುಕೊಂಡರು.
ಖಾತೆ ಮಾಡಿಕೊಡಲು ಸಲ್ಲಿಸಿದ್ದ ಅರ್ಜಿ ಎರಡು ತಿಂಗಳಾದರೂ ಕೈಗೆತ್ತಿಕೊಳ್ಳದೆ ಇಟ್ಟುಕೊಂಡಿದ್ದನ್ನು ಗಮನಿಸಿ, ಸಂಬಂಧಿಸಿದ ಅಧಿಕಾರಿಗಳಿಂದ ವಿವರಣೆ ಕೇಳಿದರು. ವಿಳಂಬ ಮಾಡಲು ಕಾರಣವೇನು? ನಿಗದಿತ ಅವಧಿಯೊಳಗೆ ಕಾನೂನಿನ ಚೌಕಟ್ಟಿನಲ್ಲಿ ಖಾತೆ ಮಾಡಿಕೊಡಲು ಸಾಧ್ಯವಾಗದಿದ್ದರೆ ಹಿಂಬರಹ ಕೊಡಬೇಕೇ ಹೊರತು ಕಚೇರಿಗೆ ಅಲೆದಾಡಿಸಬಾರದೆಂದು ಹೇಳಿದರು.
ಮನೆ ಕಂದಾಯ ಕಟ್ಟಲು ಕಚೇರಿಗೆ ಜನರು ಆಗಮಿಸಿ ಕಾದು ಕುಳಿತಿದ್ದರೂ ಕಂದಾಯ ನಿರೀಕ್ಷಕರು ಇರಲಿಲ್ಲ. ಈ ವೇಳೆ ದೂರವಾಣಿ ಮೂಲಕ ವಿಚಾರಿಸಿದಾಗ ವಾರ್ಡ್‌ನಲ್ಲಿ ಸಂಗ್ರಹ ಮಾಡುತ್ತೇವೆಂಬ ಉತ್ತರ ಬಂತು. ಕಂದಾಯ ನಿರೀಕ್ಷಕರು ಕಚೇರಿಯಲ್ಲಿ ಇಲ್ಲದ ಸಂದರ್ಭ ಕಂದಾಯ ಕಟ್ಟಿಸಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ವಲಯ ಸಹಾಯಕ ಆಯುಕ್ತರಿಗೆ ಮೇಯರ್ ಸೂಚಿಸಿದರು.