

ಮಡಿಕೇರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಮೃತ ಸರೋವರ’ ಯೋಜನೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಆಡಳಿತದ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾದ ಬೆಳವಣಿಗೆ ಕಡಗದಾಳು ಗ್ರಾಮ ಸಭೆಯಲ್ಲಿ ನಡೆಯಿತು.
ಕಡಗದಾಳು ಗ್ರಾಮದ ಮಾಣಿಕ್ಯ ಕೆರೆಯನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸುವುದಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿದ್ದು, ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಈ ಹಿಂದೆ ಗ್ರಾಮಸ್ಥ ಮಾದೇಟಿರ ತಿಮ್ಮಯ್ಯ ಹಾಗೂ ಇತರರು ಆರೋಪಿಸಿದ್ದರು. ಆರೋಪದ ಸಂಬಂಧ ಸಭೆಯಲ್ಲಿ ಸ್ಪಷ್ಟನೆ ನೀಡಲು ಅಧ್ಯಕ್ಷ ಬಿ.ಟಿ. ಜಯಣ್ಣ ಮುಂದಾದರು. ಆರೋಪದ ಅಂಶಗಳಿಗೆ ಪವರ್ ಪಾಯಿಂಟ್ ಮೂಲಕ ಉತ್ತರಿಸಿದರು. ಈ ವೇಳೆ ಮಾದೇಟಿರ ತಿಮ್ಮಯ್ಯ ಹಾಗೂ ಜಯಣ್ಣ ನಡುವೆ ಸುದೀರ್ಘ ವಾದ-ಪ್ರತಿವಾದ ನಡೆಯಿತು.
ಸರ್ಕಾರದ ನಿಯಮಗಳಿಗೆ ಅನುಗುಣವಾಗಿಯೇ ಕಾಮಗಾರಿ ನಡೆಸಿದ್ದೇವೆ. ಇದರಿಂದ ಗ್ರಾಮಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಪ್ರವಾಸೋದ್ಯಮದ ಭಾಗವಾಗಿ ಅಭಿವೃದ್ಧಿಪಡಿಸಿದರೆ ಪಂಚಾಯಿತಿಗೆ ಆದಾಯವೂ ಬರುತ್ತದೆ. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಜಯಣ್ಣ ಮನವಿ ಮಾಡಿದರು.
ಅಮೃತ ಸರೋವರ ಯೋಜನೆಯ ಮಾರ್ಗಸೂಚಿಯನ್ನು ಪಾಲನೆ ಮಾಡದೆ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ನಡೆಸುವ ಬಗ್ಗೆ ಗ್ರಾಮಸ್ಥರ ಸಲಹೆ ಪಡೆದಿಲ್ಲ. ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿಯೂ ಇಲ್ಲ. ಪಂಚಾಯಿತಿ ತನ್ನಿಷ್ಟದಂತೆ ಕಾಮಗಾರಿ ನಡೆಸಿದೆ. ಮಳೆಗಾಲದಲ್ಲಿ ಪಂಪ್‌ಸೆಟ್ ಬಳಸಿ ನೀರು ಹೊರಹಾಕಿ ಕೆರೆಯ ಸುತ್ತ ಅರ್ಧ ಭಾಗದಿಂದ ಕಲ್ಲು ಜೋಡಿಸಲಾಗಿದೆ. ಇದರ ಅಗತ್ಯ ಏನಿತ್ತು. ಭಾರಿ ಮಳೆಯ ನಡುವೆ ನಡೆದಿರುವ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಮಾದೇಟಿರ ತಿಮ್ಮಯ್ಯ ಆರೋಪಿಸಿದರು.
ತಿಮ್ಮಯ್ಯ ಆರೋಪಕ್ಕೆ ಕೆಲ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು. ಇದೊಂದು ಉತ್ತಮ ಯೋಜನೆಯಾಗಿದ್ದು, ಬೇಸಿಗೆಯಲ್ಲಿ ಕಾಮಗಾರಿ ಮಾಡಿದರೆ ಸಮಸ್ಯೆಯಾಗುತ್ತಿರಲಿಲ್ಲ. ಈ ಸಂಬಂಧ ಸಲಹೆ ನೀಡಿದರೂ ಪಂಚಾಯಿತಿಯವರು ಸ್ವೀಕರಿಸಲಿಲ್ಲ. ಕೆಲವರು ಉಡಾಫೆಯಿಂದ ವರ್ತಿಸಿದರು ಎಂದು ತಿಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಒಂದೇ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆದದ್ದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಇತರೆ ವಿಚಾರಗಳ ಚರ್ಚೆಗೂ ಅವಕಾಶ ನೀಡಲು ಮನವಿ ಮಾಡಿದರು. ಕಡೆಗೆ ‘ಅಮೃತ ಸರೋವರ’ ಕಾಮಗಾರಿ ಬಗ್ಗೆ ಚರ್ಚಿಸಲು ಮುಂದೆ ವಿಶೇಷ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಗಾಂಜಾ ವಿರುದ್ಧ ಕ್ರಮ ಕೈಗೊಳ್ಳಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಾಂಜಾ ಮಾರಾಟ ವಿಚಾರ ಗ್ರಾಮಸಭೆಯಲ್ಲೂ ಪ್ರತಿಧ್ವನಿಸಿತು. ಕತ್ತಲೆಕಾಡು ನಿವಾಸಿ ನಾಸರ್ ಈ ವಿಚಾರ ಪ್ರಸ್ತಾಪಿಸಿ, ಗ್ರಾಮ ವ್ಯಾಪ್ತಿಯಲ್ಲಿ ಹಲವು ಯುವಕರು ಮಾದಕ ವ್ಯಸನಕ್ಕೆ ಒಳಗಾಗಿದ್ದಾರೆ. ಬೇರೆ ಬೇರೆ ಕಡೆಯಿಂದ ಗಾಂಜಾ ಪೂರೈಕೆಯಾಗುತ್ತಿದೆ. ಇದರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಮಾದೇಟಿರ ತಿಮ್ಮಯ್ಯ, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿಕೊಂಡು ಅದರೊಳಗೆ ಮಾದಕ ವ್ಯಸನ, ಮದ್ಯಪಾನ ಮಾಡುವ ಚಟುವಟಿಕೆ ಹಲವೆಡೆ ನಡೆಯುತ್ತಿದೆ. ಪೊಲೀಸ್ ಸಿಬ್ಬಂದಿ ಬೀಟ್ ತೆರಳಿ ಅಂಥವರನ್ನು ಹೆಡೆಮುರಿ ಕಟ್ಟಬೇಕೆಂದು ಒತ್ತಾಯಿಸಿದರು.
ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಕ್ಲೋಸ್‌ಬರ್ನ್ ವಾರ್ಡ್ ಸದಸ್ಯೆ ಪುಷ್ಪಾವತಿ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ. ಪ್ರತಿ ಬಾರಿ ಅಧಿಕಾರಿಗಳು ಭೇಟಿ ನೀಡಿ ತೆರಳುತ್ತಾರೆ. ಆದ್ರೆ ಅಕ್ರಮ ಮಾರಾಟ ಮಾತ್ರ ನಿಂತಿಲ್ಲ. ಅಕ್ರಮ ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಎಎಸ್‌ಐ ಶ್ರೀಧರ್, ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. ಮುಂದಿನ ದಿನದಲ್ಲಿ ಸಿಬ್ಬಂದಿಯ ಬದಲು ಮೇಲ್ದರ್ಜೆಯ ಅಧಿಕಾರಿಗಳನ್ನೇ ಸ್ಥಳಕ್ಕೆ ಕಳುಹಿಸಿ ತಪಾಸಣೆ ನಡೆಸುವುದಾಗಿ ಭರವಸೆ ನೀಡಿದರು.
ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ ಪಾಲ್ಗೊಂಡಿದ್ದರು. ಉಪಾಧ್ಯಕ್ಷೆ ಪ್ರಭಾವತಿ, ಪಿಡಿಒ ಬಿ.ಡಿ. ದೇವಿಕಾ, ವಿವಿಧ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಕಡಗದಾಳು ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು.