ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ

12 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಧದ ಕ್ರೀಡಾ ಸಾಧಕರ ಸಾಧನೆಯಿಂದ ಭಾರತದ ಗೌರವ ಅಧಿಕವಾಗಿದೆ. ಕ್ರೀಡಾ ಪಟುಗಳು ರೂಢಿಸಿಕೊಳ್ಳುವ ಏಕಾಗ್ರತೆಯ ಕಠಿಣ ಪರಿಶ್ರಮದಿಂದ ವಿಶ್ವದೆತ್ತರದ ಸಾಧನೆ ಮಾಡಲು ಸಾಧ್ಯ ಎಂದು ಕೆಸಿಡಿ ಪ್ರಾಚಾರ್ಯ ಡಾ. ಡಿ. ಬಿ. ಕರಡೋಣಿ ಹೇಳಿದರು.
ನಗರದ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ಕ್ರೀಡೆಗಳ ಮೂಲಕ ಬಹು ಮುಖ್ಯವಾಗಿ ದೈಹಿಕ ಆರೋಗ್ಯ ಸಂವರ್ಧನೆಗೊಳ್ಳುತ್ತದೆ. ಜತೆಗೆ ಸ್ಪರ್ಧಾ ಮನೋಭಾವ, ಕಷ್ಟ ಸಹಿಷ್ಣುತೆ, ತಾಳ್ಮೆ, ಎಂತಹುದೇ ಪರಿಸ್ಥಿತಿಯನ್ನಾದರೂ ನಿಭಾಯಿಸುವ ಛಲ ಸೇರಿ ಅನೇಕ ಗುಣಾತ್ಮಕ ಸಂಗತಿಗಳು ವಿದ್ಯಾರ್ಥಿಗಳಲ್ಲಿ ಅಂಕುರಿಸುತ್ತವೆ. ಹೀಗಾಗಿ ವಿದ್ಯಾರ್ಥಿಗಳು ನಿತ್ಯ ವಿವಿಧ ಆಟೋಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ ಸಂಸ್ಥಾಪಕ ಅರುಣ ಚರಂತಿಮಠ ಶಾಲಾ ಚಟುವಟಿಕೆಗಳಲ್ಲಿ ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸಂಗೀತ, ಕಲೆ ಸೇರಿ ವಿದ್ಯಾರ್ಥಿಗಳ ಬಹುಮುಖ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಂಗತಿಗಳಿಗೆ ಆದ್ಯತೆ ನೀಡಿರುವುದು ಶಿಕ್ಷಣ ಚಿಂತಕರ ಗಮನಸೆಳೆದಿದೆ ಎಂದರು.
ಎಆರ್‌ಸಿ ಫೌಂಡೇಶನ್ ಅಧ್ಯಕ್ಷ ಅರುಣ ಚರಂತಿಮಠ, ಶಾಲೆ ಪ್ರಾಚಾರ್ಯೆ ಅಶ್ವಿನಿ ಚಿಕ್ಕಬಳ್ಳಾಪುರ ಮಾತನಾಡಿದರು. ಅತ್ಯುತ್ತಮ ಪಾರಿತೋಷಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲೆ ಆಡಳಿತ ಮಂಡಳಿ ಸದಸ್ಯರು, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net