ಕಠಿಣ ತಪಸ್ಸಿನೊಂದಿಗೆ ಮನಸ್ಸನ್ನು ಹತೋಟಿ

12 HRS 05
ಹಿರೀಸಾವೆ ಹೋಬಳಿಯ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಸೋಮವಾರ ರಾತ್ರಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶ್ರೀ ಚೈತನ್ಯನಾಥ ಸ್ವಾಮೀಜಿ, ಶ್ರೀ ಬಸವೇಶ್ವರ ಚೈತನ್ಯ ಸ್ವಾಮೀಜಿ, ಶ್ರೀ ಶೈಲದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಎನ್.ಆರ್.ರತ್ನರಾಜ್, ಶಿವನಂಜೇಗೌಡ, ಪ್ರಕಾಶ್, ಗಣೇಶ್‌ಗೌಡ, ಹೊನ್ನೇಗೌಡ, ನಂದೀಶ್ ಇದ್ದರು.
Published on

ಹಿರೀಸಾವೆ: ಉತ್ತಮ ಸಂಸ್ಕಾರ ಅಳವಡಿಸಿಕೊಂಡರೆ ಮಾತ್ರ ಬದುಕಿನಲ್ಲಿ ಮುಕ್ತಿ ಹೊಂದಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಹೋಬಳಿಯ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿಯ ಬೃಹತ್ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಏರ್ಪಡಿಸಿದ್ದ ಗುರುವಂದನಾ ಹಾಗೂ ಧಾರ್ಮಿಕ ಮಹಾಸಭೆಯಲ್ಲಿ ಆಶೀರ್ವಚನ ನೀಡಿ, ನಿತ್ಯವೂ ಮನಸನ್ನು ಶುದ್ಧಿಗೊಳಿಸಬೇಕು ಎಂದರು.

ಸುನಾಮಿಯನ್ನಾದರೂ ತಡೆಯಬಹುದು. ಆದರೆ ಮನಸ್ಸಿನ ಓಟವನ್ನು ಅಷ್ಟು ಸುಲಭವಾಗಿ ಹಿಡಿಯಲಾಗುವುದಿಲ್ಲ. ಆದರೆ ಉತ್ತಮ ಸಂಸ್ಕಾರ, ಕಠಿಣ ತಪಸ್ಸಿನೊಂದಿಗೆ ಮನಸ್ಸನ್ನು ಹತೋಟಿ ಮಾಡಿದ್ದಲ್ಲಿ ಬದುಕನ್ನು ಜೇನಿನಂತೆ ಸವಿಯಬಹುದು. ಇಲ್ಲವಾದಲ್ಲಿ ಬದುಕು ನೀರಿನಲ್ಲಿ ಹೋಮ ಮಾಡಿದಂತಾಗಲಿದೆ ಎಂದು ತಿಳಿಸಿದರು.

ಮನುಷ್ಯನಲ್ಲಿ ಒಂದು ಕೆಟ್ಟ ಗುಣವಿದೆ. ಅದೇನೆಂದರೆ ಅದೆಷ್ಟೇ ಪ್ರಯತ್ನಿಸಿದರೂ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾನೆಯೇ ಹೊರತು ಎಂದಿಗೂ ತಿದ್ದಿಕೊಳ್ಳಲು ಮುಂದಾಗುವುದಿಲ್ಲ. ಇಲ್ಲಿ ಮನಸ್ಸಿಗೆ ಸಂಸ್ಕಾರ ನೀಡದೆ ಪರಿಹಾರವೇ ಇಲ್ಲ ಎಂದರು.

ವೈದ್ಯರ ಬಳಿ ದೇಹದ ಕಾಯಿಲೆ, ವಕೀಲರ ಬಳಿ ಸತ್ಯಾಂಶ, ಗುರುವಿನ ಹತ್ತಿರ ವೇದನೆ ಹಾಗೂ ದೇವರ ಬಳಿ ಸಂಕಷ್ಟವನ್ನು ಹೇಳಿಕೊಳ್ಳಿ. ಎಲ್ಲದಕ್ಕೂ ಪರಿಹಾರವಿರುತ್ತದೆ. ಆದರೆ ಎಲ್ಲವನ್ನೂ ಮುಚ್ಚಿಡುತ್ತಾ ಸಾಗಿದರೆ ಅನಾಹುತದ ಸುಳಿಗೆ ಸಿಲುಕುವಿರಿ ಎಂದು ಎಚ್ಚರಿಸಿದರು.

ಪ್ರಾಣಿಯ ದೇಹ ಭೋಗಕ್ಕೆ, ಮನುಷ್ಯನ ದೇಹ ಯೋಗಕ್ಕೆ. ಪ್ರಾಣಿಗಳು ಸದಾ ತಿನ್ನುವ ಮೂಲಕ ತನ್ನ ಬದುಕಿನ ಸಮಯವನ್ನು ತಳ್ಳಿಬಿಡುತ್ತದೆ. ಆದರೆ ಮನುಷ್ಯನ ಜನ್ಮ ಅಂತಹದ್ದಲ್ಲ. ಎಷ್ಟು ಸಿಕ್ಕರೂ ಸಾಲುವುದಿಲ್ಲ, ಏನನ್ನೂ ಬಿಡುವುದಿಲ್ಲ. ಎಲ್ಲವೂ ನನ್ನದೇ, ನನಗೇ ಬೇಕು ಎನ್ನುವಂತಹ ದುರಾಸೆ ಪ್ರಾಣಿಯಾಗಿದ್ದಾನೆ. ಇದರಿಂದ ಮುಕ್ತಿ ಎಂದಿಗೂ ಸಿಗುವುದಿಲ್ಲ. ಸಂಸ್ಕಾರ ಕಲಿತು ಧರ್ಮ ಕಾರ್ಯದಲ್ಲಿ ತೊಡಗಿದರೆ ಸಾಕು, ದೇವರ ದರ್ಶನದ ಜತೆಗೆ ಅವನ ಪಾದದಡಿ ಮುಕ್ತಿಗೆ ಅವಕಾಶ ದೊರೆಯಲಿದೆ ಎಂದರು.

ಬಳಿಕ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಿದ ಭಕ್ತರು, ಪುಷ್ಪವೃಷ್ಟಿ ಮಾಡಿ ಆಶೀರ್ವಾದ ಪಡೆದರು. ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಕ್ಷೇತ್ರದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶ್ರೀ ಚೈತನ್ಯನಾಥ ಸ್ವಾಮೀಜಿ, ಹೊಸಹಳ್ಳಿ ಶಕ್ತಿ ಮಠದ ಶ್ರೀ ಬಸವೇಶ್ವರ ಚೈತನ್ಯ ಸ್ವಾಮೀಜಿ, ಶ್ರೀಶೈಲದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎನ್.ಆರ್.ರತ್ನರಾಜ್, ಶಿವನಂಜೇಗೌಡ, ಸದಸ್ಯ ಶ್ರೀಕಂಠು, ಗುಡಿಗೌಡ ಪ್ರಕಾಶ್, ಗಣೇಶ್‌ಗೌಡ, ಹೊನ್ನೇಗೌಡ, ನಂದೀಶ್, ಸಿದ್ಧಗಂಗಾಧರಗೌಡ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net