ಕಠಿಣ ಅಭ್ಯಾಸದಿಂದ ಸಾಧನೆ: ವಿದ್ಯಾರ್ಥಿಗಳಿಗೆ ಡಿಸಿ ಆರ್.ಲತಾ ಸಲಹೆ

9 CBP 2 SchoolVisit
Published on

ಚಿಕ್ಕಬಳ್ಳಾಪುರ : ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆ, ಮಾರ್ಗದರ್ಶನ, ಕಲಿಕೆ ಮತ್ತು ಫಲಿತಾಂಶದ ನಿರೀಕ್ಷೆ ಸೇರಿ ನಾನಾ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಆರ್.ಲತಾ ಸಂವಾದ ನಡೆಸಿದರು.

ಬಿ.ಬಿ.ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಬುಧವಾರ ಭೇಟಿ ನೀಡಿ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿ, ಪ್ರೋತ್ಸಾಹದಾಯಕ ನುಡಿಗಳ ಮೂಲಕ ಹೆಚ್ಚಿನ ಅಂಕ ಗಳಿಕೆಗೆ ಸಲಹೆ ನೀಡಿದರು.

ಕಳೆದೆರಡು ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವಂತಹ ಸಾಧನೆ ಮಾಡಿದೆ. ಹಿಂದೆ ರಾಜ್ಯದಲ್ಲಿಯೇ ಜಿಲ್ಲಾವಾರು ಪ್ರಥಮ ಸ್ಥಾನ, ಅತಿ ಹೆಚ್ಚು ಟಾಫರ್ಸ್‌ನಲ್ಲಿ ಮುಂಚೂಣಿಯಲ್ಲಿ ಇರುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗೆಯೇ 2021-22 ನೇ ಸಾಲಿನಲ್ಲಿಯೂ ಉತ್ತಮ ದಾಖಲೆ ಬರೆಯಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಠಿಣ ಅಭ್ಯಾಸ ಮಾಡಬೇಕೆಂದು ತಿಳಿಸಿದರು.

ಈಗಾಗಲೇ ಶಿಕ್ಷಕರು ಪಾಠ ಪ್ರವಚನಗಳನ್ನು ಮುಗಿಸಿದ್ದಾರೆ. ಪ್ರಸ್ತುತ ಮರು ಮನನ ಮತ್ತು ಅಭ್ಯಾಸ ಚಟುವಟಿಕೆ ನಡೆಯುತ್ತಿದೆ. ವಿದ್ಯಾರ್ಥಿಗಳು ಅರ್ಥವಾಗದ ವಿಷಯಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಬೇಕು. ಬಹುತೇಕ ಎಲ್ಲ ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕ ಪಡೆಯಲು ಶ್ರಮಿಸಬೇಕು ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯರಾಮರೆಡ್ಡಿ ಮತ್ತಿತರರು ಇದ್ದರು.

ಪ್ರಥಮ ಸ್ಥಾನ ಸಾಧನೆ ಗುರಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರೊಂದಿಗೆ ಪರೀಕ್ಷಾ ಪೂರ್ವ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲಾಯಿತು.

ಕಳೆದ ಬಾರಿಯಂತೆ ಪ್ರಸಕ್ತ ಸಾಲಿನಲ್ಲೂ ಜಿಲ್ಲೆಯಲ್ಲಿ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ, ಮಕ್ಕಳಿಗೆ ಗುಣಾತ್ಮಕ ಬೋಧನೆ, ವಾರದ ಮತ್ತು ಮಾಸಿಕ ಪರೀಕ್ಷೆ, ಬಹು ಆಯ್ಕೆ ಪ್ರಶ್ನೆಗಳುಳ್ಳ ಮಾದರಿ ಪರೀಕ್ಷೆ ಆಯೋಜನೆ, ಪಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆ ಮತ್ತು ಜಿಲ್ಲಾ ಮಟ್ಟದ ಮಧ್ಯಂತರ ಪರೀಕ್ಷೆಗಳನ್ನು ಈಗಾಗಲೇ ನಡೆಸಲಾಗಿದೆ. ವಿಶೇಷೆ ಆಸಕ್ತಿವಹಿಸಿ ಜಿಲ್ಲಾಡಳಿತವೇ ಸರಳೀಕರಿಸಿ ಸಿದ್ಧಪಡಿಸಿದ ಪ್ರಶ್ನೋತ್ತರ ಸಾಮಗ್ರಿ ವಿತರಿಸಲಾಗಿದೆ. ಇನ್ನೂ ರಾಜ್ಯದಲ್ಲಿ ನಿರೀಕ್ಷಿತ ಜಿಲ್ಲಾವಾರು ಪ್ರಥಮ ಸಾಧನೆ ತೋರುವ ನಿಟ್ಟಿನಲ್ಲಿ ಶ್ರಮಿಸುವುದರ ಬಗ್ಗೆ ಚರ್ಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net