

ಚಿತ್ರದುರ್ಗ: ಅತ್ಯಂತ ಕಟ್ಟೆಚ್ಚರದಿಂದ ಅರಣ್ಯ, ವನ್ಯಜೀವಿ ಸಂರಕ್ಷಣೆ ಕಾರ‌್ಯಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂದು ಡಿಸಿಎಫ್ ಟಿ.ರಾಜಣ್ಣ, ಅಧಿಕಾರಿ, ಸಿ ಬ್ಬಂದಿಗೆ ಕಿವಿಮಾತು ಹೇಳಿದರು.
ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿ, ಚಿಕ್ಕ ನಿರ್ಲಕ್ಷೃವೂ ಜೀವಕ್ಕೆ ಅಪಾಯ ಉಂಟು ಮಾಡಬಹುದು. ಅರಣ್ಯ, ವನ್ಯಜೀವಿ ಸಂರಕ್ಷಣೆ ನಮ್ಮ ಹೊಣೆ ಮತ್ತು ಕರ್ತವ್ಯ. ಇದನ್ನು ನಿಭಾಯಿಸುವ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಸಹಿತ ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಾರ‌್ಯಾಚರಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾಡುಗಳ್ಳರ ವಿರುದ್ಧದ ಕಾರ‌್ಯಾಚರಣೆ, ವನ್ಯಜೀವಿಗಳಿಂದ, ಅರಣ್ಯ ಒತ್ತುವರಿ ತೆರವಿನಂಥ ಕೆಲವು ಸಂದರ್ಭಗಳಲ್ಲಿ ಹಲವರು ಪ್ರಾಣ ತೆತ್ತಿದ್ದಾರೆ. 1966 ಆಗಸ್ಟ್ 13 ರಿಂದ 2024 ಜುಲೈ 11 ವರೆಗೆ ರಾಜ್ಯದಲ್ಲಿ 61 ಅಧಿಕಾರಿ, ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಬದ್ಧತೆ, ಶ್ರದ್ಧೆ ಮತ್ತು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಆರೋಗ್ಯದೆಡೆ ಕೂಡ ಸಾಕಷ್ಟು ಗಮನ ಹರಿಸಬೇಕು. ಆರೋಗ್ಯವನ್ನು ಕಾಪಾಡಿಕೊಂಡರೆ ಕರ್ತವ್ಯದಲ್ಲಿ ದಕ್ಷತೆ ಸಾಧ್ಯವಾಗಲಿದೆ ಎಂದರು.
ಈ ವೇಳೆ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಹರೀಶ್, ಹಿರಿಯೂರು ಎಸಿಎಫ್ ಸುರೇಶ್, ಡಿಸಿಎಫ್ ಕಚೇರಿ ವ್ಯವಸ್ಥಾಪಕ ಎನ್.ಸತೀಶ್, ಆರ್‌ಎಫ್‌ಒಗಳಾದ ಎಸ್.ಸತೀಶ್, ಆರ್.ವಸಂತ್, ಬಿ.ಶಶಿಧರ್, ಸುನೀಲ್‌ಕುಮಾರ್, ಡಿ.ಎನ್.ಹರೀಶ್, ಎಸ್.ವಿ.ಮಂಜುನಾಥ್, ಬಹುಗುಣ, ಉಷಾರಾಣಿ, ಎಸ್.ಬಾಬು, ಶ್ವೇತಾ, ಕಿರಣ್, ನಿತಿನ್, ದಯಾನಂದ್ ಹಾಗೂ ಪ್ರದೀಪ್ ಕೇಸರಿ, ರುದ್ರಮುನಿ, ಆಶಾ ಮತ್ತಿತರ ಅಧಿಕಾರಿ, ಸಿಬ್ಬಂದಿ ಇದ್ದರು.
*ಆರೋಗ್ಯ ತಪಾಸಣೆ: ಕಾರ‌್ಯಕ್ರಮದ ಅಂಗವಾಗಿ ಕಚೇರಿ ಆವರಣದಲ್ಲಿ ಅರಣ್ಯಾಧಿಕಾರಿ, ಸಿಬ್ಬಂದಿಗೆ ಆರೋಗ್ಯ ತಪಾಸಣೆ ಏರ್ಪಡಿಸಲಾಗಿತ್ತು. ವೈದ್ಯರಾದ ಡಾ.ಕೆ.ಎಸ್.ರಕ್ಷಿತಾ, ಡಾ.ಪೂರ್ಣಿಮಾ ಮತ್ತು ಬೆಂಗಳೂರಿನ ಖಾಸಗಿ ಪ್ರಯೋಗಾಲಯದ ಸಿಬ್ಬಂದಿ ಇದ್ದರು. 50 ಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ಮಾಡಲಾಯಿತು.