

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಚುನಾವಣೆಗೆ ನಿಯೋಜಿತರಾಗಿರುವ ಅಧಿಕಾರಿ-ಸಿಬ್ಬಂದಿ ತಮಗೆ ವಹಿಸಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಧಿಕಾರಿ-ಸಿಬ್ಬಂದಿ, ವಿವಿಧ ತಂಡಗಳ ಮುಖ್ಯಸ್ಥರು ಹಾಗೂ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ನಾಮಪತ್ರ ಸಲ್ಲಿಕೆಗೆ ಕೊನೆ ಮೂರು ದಿನಗಳು (ಏ.4 ಕೊನೇ ದಿನ) ಉಳಿದಿದ್ದು, ಕರ್ತವ್ಯದ ಹೊಣೆಗಾರಿಕೆ ದಿನೇ ದಿನೆ ಹೆಚ್ಚಾಗುತ್ತಿದೆ. ಆದ್ದರಿಂದ ಜವಾಬ್ದಾರಿಯಿಂದ ಕಾರ‌್ಯನಿರ್ವಹಿಸಬೇಕು. ತಪ್ಪಿದಲ್ಲಿ ಸಂಭಾವ್ಯ ಘಟನೆಗಳಿಗೆ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಧಾರ್ಮಿಕ ಸ್ಥಳಗಳಲ್ಲಿ ಸಭೆ-ಸಮಾರಂಭ ಆಯೋಜಿಸುವುದು, ಮತದಾರರ ಮನವೊಲಿಕೆಗಾಗಿ ಔತಣಕೂಟ ಏರ್ಪಡಿಸುವುದು ಇತ್ಯಾದಿಗಳ ಕುರಿತಂತೆ ಸೂಕ್ಷ್ಮವಾಗಿ ಗಮನಿಸಿ, ವರದಿ ಕೊಡಬೇಕು ಎಂದು ಸೂಚಿಸಿದರು.
ಚೆಕ್‌ಪೋಸ್ಟ್ ಸಿಬ್ಬಂದಿ ಹಾಗೂ ಸಂಚಾರಿದಳ ಸೇರಿ ವಿವಿಧ ತಂಡಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಅಧಿಕಾರಿ- ಸಿಬ್ಬಂದಿಗೆ ಹಲವು ತರಬೇತಿಗಳಾಗಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಭಂದಿಗೆ ಶೀಘ್ರ ತರಬೇತಿ ಆಯೋಜಿಸಲಾಗುವುದು. ಸಲ್ಲದ ನೆಪವೊಡ್ಡಿ ಚುನಾವಣಾ ಕರ್ತವ್ಯದಿಂದ ವಿನಾಯಿತ ಕೇಳುವ ನೌಕರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
85 ವರ್ಷ ಮೀರಿದ ವಯೋವೃದ್ಧರು ಮತ್ತು ಅಂಗವಿಕಲರು ತಮ್ಮ ಮನೆಯಲ್ಲೇ ಮತದಾನ ಮಾಡಲು ಕೋರಿಕೆ ಅರ್ಜಿ ಪ್ರತಿಯನ್ನು ತಲುಪಿಸಲಾಗುವುದು. ಅಂಚೆ ಮತದಾನ ಬಯಸಿರುವವರ ವಿವರಗಳನ್ನು ಸಕ್ರಮ ಪ್ರಾಧಿಕಾರಕ್ಕೆ ತಲುಪಿಸಬೇಕು. ಹಿಂದಿನ ಚುನಾವಣೆಯಲ್ಲಿ ಶೇ.70ಕ್ಕಿಂತ ಕಡಿಮೆ ಮತದಾನ ವಾಗಿರುವ ಮತಗಟ್ಟೆ ಪ್ರದೇಶಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆ ಆಗಬೇಕು ಎಂದು ಹೇಳಿದರು. ಎಸ್‌ಪಿ ಧರ್ಮೆಂದರ್‌ಕುಮಾರ್ ಮಾತನಾಡಿದರು. ಎಡಿಸಿ ಬಿ.ಎಂ.ಕುಮಾರಸ್ವಾಮಿ ಮತ್ತಿತರರು ಇದ್ದರು.