

ಬೆಂಗಳೂರು ಗ್ರಾಮಾಂತರ: ಅತ್ಯಂತ ವೇಗವಾಗಿ ಒಬ್ಬರಿಂದ ಹಲವರಿಗೆ ಹರಡುವ ಕರೊನಾ ಸೋಂಕನ್ನು ಕಟ್ಟಿ ಹಾಕಬೇಕು. ಸೋಂಕಿನ ಸರಪಳಿ ತುಂಡರಿಸಬೇಕು. ಇದಕ್ಕೆ ಸರ್ಕಾರ ಜಾರಿಗೊಳಿಸಿರುವ ಕರೊನಾ ಮಾರ್ಗಸೂಚಿಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಪಂ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಎಂಟಿಬಿ ಚಾರಿಟಬಲ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಕರೊನಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೊನಾ 3ನೇ ಅಲೆ ದಾಂಗುಡಿ ಇಡುತ್ತಿದೆ. ನೆರೆಯ ಕೇರಳದಲ್ಲಿ ಅದರ ಆರ್ಭಟ ಆರಂಭವಾಗಿದೆ. ಇದರಿಂದ ರಾಜ್ಯದಲ್ಲೂ ಆತಂಕ ಉಂಟಾಗಿದೆ. ಆದ್ದರಿಂದ ಸಾರ್ವಜನಿಕರು ಮತ್ತಷ್ಟು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ತಾಲೂಕಿನ ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆಗಳನ್ನು ನೀಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್‌ಗಳನ್ನು ವಿತರಿಸಲಾಗಿದೆ. ಸಾರ್ವಜನಿಕರು ಪರಸ್ಪರ ಅಂತರ ಕಾಯ್ದುಕೊಂಡು ಕರೊನಾ 3ನೇ ಅಲೆಯನ್ನು ಧೈರ್ಯವಾಗಿ ಎದುರಿಸಬೇಕು ಎಂದು ಕರೆ ನೀಡಿದರು.
22 ಸಾವಿರ ವಾಕ್ಸಿನ್: ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಬಡವರ ಆರೋಗ್ಯ ರಕ್ಷಣೆಗಾಗಿ ಎಂಟಿಬಿ ಚಾರಿಟಬಲ್ ಟ್ರಸ್ಟ್ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳುತ್ತಿದೆ. ಇದುವರೆಗೆ ಹೊಸಕೋಟೆ ತಾಲೂಕಿನಲ್ಲಿ 22 ಸಾವಿರ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ. ಅಭಿಯಾನವನ್ನು ಮತ್ತಷ್ಟು ಜೋರಾಗಿ ಮುಂದುವರಿಸಲಾಗುವುದು ಎಂದು ಎಂಟಿಬಿ ನಾಗರಾಜ್ ಮಾಹಿತಿ ನೀಡಿದರು.
45 ಸಾವಿರ ದಿನಸಿ ಕಿಟ್: ಕರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬಡವರು, ನಿರ್ಗತಿಕರು, ವಲಸಿಗರು ಸೇರಿ ಅವಶ್ಯವಿರುವವರಿಗೆ ಕರೊನಾ 2ನೇ ಅಲೆ ವೇಳೆ ತಾಲೂಕಿನಲ್ಲಿ 45 ಸಾವಿರ ದಿನಸಿ ಕಿಟ್ ವಿತರಿಸಲಾಗಿದೆ. ಈ ಕಾರ್ಯ ಈಗಲೂ ಮುಂದುವರಿದಿದೆ. ಕರೊನಾ ಮೊದಲ ಅಲೆ ವೇಳೆಯೂ ತಾಲೂಕಿನಲ್ಲಿ 50 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಕೊಡಲಾಗಿತ್ತು ಎಂದು ಮಾಜಿ ಸಚಿವರು ಹೇಳಿದರು.
ಶೀಘ್ರ ಸಚಿವ ಸಂಪುಟ ರಚನೆ: ಕರೊನಾ ನಿಯಂತ್ರಣ, ಪ್ರವಾಹ ಪರಿಹಾರ ಸೇರಿ ರಾಜ್ಯದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಚರ್ಚಿಸಿದ್ದಾರೆ. ಸಿಎಂ ಆದ ಬಳಿಕ ದೆಹಲಿಗೆ ಭೇಟಿ ನೀಡಿ ಪಕ್ಷದ ಎಲ್ಲ ವರಿಷ್ಠರನ್ನೂ ಭೇಟಿಯಾಗಿ ಬಂದಿದ್ದಾರೆ. ಬುಧವಾರ ಅಥವಾ ಶುಕ್ರವಾರ ಸಚಿವ ಸಂಪುಟ ರಚನೆಯಾಗಲಿದೆ. ಪಕ್ಷದ ವರಿಷ್ಠರೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಚಿವ ಸಂಪುಟ ಸೇರ್ಪಡೆ ಬಗ್ಗೆ ನಾನು ಯಾವುದೇ ಲಾಬಿ ಮಾಡಿಲ್ಲ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.