

ಹುಕ್ಕೇರಿ: ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘದ ಮಹಾಮಂಡಳದ ಹುಕ್ಕೇರಿ ತಾಲೂಕಿನ ಸದಸ್ಯರ ಕಾರ್ಯಾಲಯ ಕಟ್ಟಡಕ್ಕೆ ಬೇಕಾದ ಆರ್ಥಿಕ ನೆರವನ್ನು, ಘಟಪ್ರಭಾ ಮತ್ತು ಮಲಪ್ರಭಾ ಅಚ್ಚುಕಟ್ಟು ಪ್ರದೇಶ (ಕಾಡಾ) ಅಭಿವದ್ಧಿ ಪ್ರಾಧಿಕಾರದಿಂದ ಒದಗಿಸುವುದಾಗಿ ಅರಣ್ಯ ಮತ್ತು ಆಹಾರ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿದರು.
ತಾಲೂಕಿನ ಹಿಡಕಲ್ ಡ್ಯಾಂನಲ್ಲಿನ ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘದ ಮಹಾಮಂಡಳಕ್ಕೆ ನಡೆದ ಚುನಾವಣೆಯಲ್ಲಿ ನೊಗನಿಹಾಳ ಗ್ರಾಮದ ಅಜ್ಜಪ್ಪ ಕಲ್ಲಟ್ಟಿ ಅವರ ಅವಿರೋಧ ಆಯ್ಕೆಗೆ ಸಹಕರಿಸಿ, ಮಾರ್ಗದರ್ಶನ ನೀಡಿದ ಹಿನ್ನೆಲೆಯಲ್ಲಿ ಈಚೆಗೆ ಬೆಲ್ಲದ ಬಾಗೇವಾಡಿಯಲ್ಲಿ ಮಂಡಳದ ಸದಸ್ಯರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಹಿಡಕಲ್ ಜಲಾಶಯದಿಂದ ತಾಲೂಕಿನ ರೈತರಿಗೆ ನೀರು ಒದಗಿಸುವ ಕಾಲುವೆಗಳಲ್ಲಿ ತುಂಬಿರುವ ಹೂಳನ್ನು ನರೇಗಾ ಯೋಜನೆಯಡಿ ಸ್ವಚ್ಛಗೊಳಿಸಲು ತಿಳಿಸುತ್ತೇನೆ. ಮಹಾಮಂಡಳದ ಸದಸ್ಯರು ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವ ಕಾರ್ಯ ನೋಡಿಕೊಳ್ಳುವಂತೆ ಸಲಹೆ ನೀಡಿದರು.
ತಾಲೂಕಿನಲ್ಲಿ ನೀರಾವರಿ ವಂಚಿತ ಪ್ರದೇಶಕ್ಕೆ ನೀರು ಒದಗಿಸಲು ಮಲ್ಲಿಕಾರ್ಜುನ ಏತ ನೀರಾವರಿ ಯೋಜನೆ ಹಾಗೂ ಮಳೆಗಾಲ ಹೊರತುಪಡಿಸಿ ಇನ್ನುಳಿದ ಸಮಯದಲ್ಲಿ ಬತ್ತುವ ಹಿರಣ್ಯಕೇಶಿ ನದಿಗೆ ವರ್ಷವಿಡಿ ನೀರು ಇರುವಂತೆ ಮಾಡಲು ಬಾಂದಾರ ನಿರ್ಮಿಸಿ ಆ ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, ನಿಂತ ನೀರಾದಂತೆ ಇರುವ ನೀರು ಬಳಕೆದಾರರ ಸಂಘಗಳು ಚಟುವಟಿಕೆಗಳ ಮೂಲಕ ಅಸ್ತ್ತಿತ್ವ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಉಮೇಶ ಕತ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರನ್ನು ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಸತ್ಕರಿಸಿದರು. ಮಹಾಮಂಡಳದ ನಿರ್ದೇಶಕ ಅಜ್ಜಪ್ಪ ಕಲ್ಲಟ್ಟಿ, ಸಿದ್ದಪ್ಪ ಮರಬಸ್ಸನವರ, ಸುಭಾಷ ನಾಯಿಕ, ಶಿವನಗೌಡ ಮದವಾಲ, ಬಸಗೌಡ ಪಾಟೀಲ, ವಿರೂಪಾಕ್ಷಿ ನಿಪ್ಪಾಣಿ, ಶಿವಲಿಂಗ ನಾಯಿಕ, ಬಸವರಾಜ ಖಡಕಬಾವಿ, ಬಾಳಪ್ಪ ಅಕ್ಕತಂಗೇರಹಾಳ, ಈರಗೌಡ ಪಾಟೀಲ ಇತರರು ಇದ್ದರು.