ಕಟ್ಟಡ ನವೀಕರಣ ಕಾರ್ಯ ಕಳಪೆ, ಉದ್ಘಾಟನೆಗೆ ನಿರಾಕರಿಸಿದ ಶಾಸಕ

web 11 (1)
Published on

ಬಾಳೆಹೊನ್ನೂರು: ಮಾಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನವೀಕರಣ ಕಾಮಗಾರಿ ಕಳಪೆಯಾಗಿದ್ದು, ಇದನ್ನು ನಾನು ಉದ್ಘಾಟಿಸುವುದಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮಾಗುಂಡಿ ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ ಶಿಥಿಲಗೊಂಡಿದ್ದರಿಂದ 4 ಲಕ್ಷ ರೂ. ವೆಚ್ಚದಲ್ಲಿ ನವೀಕರಣಕ್ಕೆ ಅನುದಾನ ಮಂಜೂರು ಮಾಡಲಾಗಿತ್ತು. ಸ್ಥಳೀಯ ಗುತ್ತಿಗೆದಾರರೊಬ್ಬರರು ನವೀಕರಣ ಕಾರ್ಯ ಕೈಗೊಂಡಿದ್ದರು. ಕಟ್ಟಡ ನವೀಕರಣಗೊಂಡ ಹಿನ್ನೆಲೆಯಲ್ಲಿ ಉದ್ಘಾಟನೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಿದ್ಧತೆ ಮಾಡಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದರು.
ಕಟ್ಟಡ ಉದ್ಘಾಟನೆಗೆ ಆಗಮಿಸಿದ ಶಾಸಕ ಟಿ.ಡಿ.ರಾಜೇಗೌಡ ಕಟ್ಟಡ ವೀಕ್ಷಿಸಿ ಕಟ್ಟಡದ ಮೇಲ್ಛಾವಣಿ ಸಮರ್ಪಕವಾಗಿ ಮಾಡಿಲ್ಲ. ಬಣ್ಣವನ್ನೂ ಸರಿಯಾಗಿ ಬಳಿದಿಲ್ಲ. ನವೀಕರಣ ಕಾಮಗಾರಿ ಕಳಪೆಯಾಗಿದೆ. ಇದನ್ನು ನಾನು ಉದ್ಘಾಟಿಸುವುದಿಲ್ಲ. ಮೇಲ್ಛಾವಣಿ ಸರಿ ಮಾಡಿ ಬಣ್ಣ ಬಳಿದ ನಂತರ ಕಟ್ಟಡ ಉದ್ಘಾಟಿಸಲಾಗುವುದು. ಗುತ್ತಿಗೆದಾರರು ಕೂಡಲೇ ಕಟ್ಟಡವನ್ನು ಸಮರ್ಪಕವಾಗಿ ನವೀಕರಣ ಮಾಡಬೇಕು ಎಂದು ಶಾಸಕ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net