ಕಟ್ಟಡ ಕಾರ್ಮಿಕರ ಮೇಲೆ ಚಿರತೆ ದಾಳಿ

Chirate
ಬೆಳಗಾವಿ ಜಾಧವ ನಗರದ ಪೊದೆಯಲ್ಲಿ ಅವಿತುಕೊಂಡಿರುವ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದು.
Published on

ಬೆಳಗಾವಿ: ಇಲ್ಲಿನ ಜಾಧವ ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಚಿರತೆ ಪ್ರತ್ಯಕ್ಷವಾಗಿದ್ದು, ಕಟ್ಟಡ ಕಾರ್ಮಿಕರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಜನನಿಬಿಡ ಪ್ರದೇಶದಲ್ಲೇ ಚಿರತೆ ಪ್ರತ್ಯಕ್ಷವಾಗಿರುವುದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಖನಗಾಂವಿ ಗ್ರಾಮದ ಸಿದರಾಯಿ ಲಕ್ಷ್ಮಣ ನಿಲಜಕರ್ (37) ಚಿರತೆಗೆ ದಾಳಿಗೆ ಒಳಗಾದ ಕಾರ್ಮಿಕ. ಇನ್ನೋರ್ವ ಕಾರ್ಮಿಕನ ಮೇಲೂ ದಾಳಿ ಮಾಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸಿದರಾಯಿ ಅವರ ಭುಜ, ಬೆನ್ನಿಗೆ ಚಿರತೆ ಪರಚಿದ್ದು, ಜನರ ಚೀರಾಟ ಕೇಳಿ ಪೊದೆಯಲ್ಲಿ ಅವಿತುಕೊಂಡಿದೆ. ಜಾಧವ ಎಂಬುವರ ಮನೆ ಪಕ್ಕದಲ್ಲೇ ಚಿರತೆ ಓಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿವೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಪತ್ತೆಗಾಗಿ ಶೋಧ ನಡೆಸಿದ್ದಾರೆ. ಬೋನು ಇಡಲಾಗಿದ್ದು, ಚಿರತೆ ಸೆರೆ ಹಿಡಿಯಲು ಗದಗದಿಂದ ಪರಿಣತರ ತಂಡವನ್ನು ಕರೆತರಲು ಅರಣ್ಯ ಇಲಾಖೆ ಕ್ರಮ ವಹಿಸಿದೆ.
ಒಂದು ವಾರದ ಅವಧಿಯಲ್ಲಿ ಚಿಕ್ಕೋಡಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಬ್ಬಿನ ಗದ್ದೆಯಲ್ಲಿ, ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಹೊರವಲಯದಲ್ಲಿ ಚಿರತೆ ಓಡಾಡಿದ ಗುರುತು ಪತ್ತೆಯಾಗಿದ್ದವು. ಇದೀಗ ಜನವಸತಿ ಪ್ರದೇಶದಲ್ಲಿಯೇ ಚಿರತೆ ಕಂಡಿರುವುದು ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ.

ಸಂಚಾರ ನಿರ್ಬಂಧ: ಹನುಮಾನ ನಗರಕ್ಕೆ ಹೊಂದಿಕೊಂಡಿರುವ ಜಾಧವ ನಗರದಲ್ಲಿ ಚಿರತೆ ಕಂಡಿದ್ದರಿಂದ ಈ ಪ್ರದೇಶದಲ್ಲಿ ಜನರ ಓಡಾಟ, ವಾಹನ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಬ್ಯಾರಿಕೇಡ್ ಹಾಕಿ ವಾಹನಗಳ ಸಂಚಾರ ಸಂಪೂರ್ಣ ನಿಲ್ಲಿಸಲಾಗಿದೆ. ಎಲ್ಲ ಸ್ಥಳೀಯ ನಿವಾಸಿಗಳಿಗೆ ಧ್ವನಿವರ್ಧಕದ ಮೂಲಕ ಮನೆಯಿಂದ ಹೊರಗೆ ಬಾರದಂತೆ ಎಚ್ಚರಿಕೆ ನೀಡಲಾಗುತ್ತಿದೆ.

ಸುದ್ದಿ ತಿಳಿದು ಹೃದಯಾಘಾತದಿಂದ ತಾಯಿ ಸಾವು

ಪುತ್ರ ಲಕ್ಷ್ಮಣ ನಿಲಜಕರ ಮೇಲೆ ಚಿರತೆ ದಾಳಿ ನಡೆಸಿದ ಸುದ್ದಿ ಕೇಳಿ ತಾಯಿ ಹೃದಯಘಾತದಿಂದ ಮೃತಪಟ್ಟಿದ್ದಾಳೆ. ತಾಲೂಕಿನ ಕೆ.ಎಚ್.ಖನಗಾವಿ ಗ್ರಾಮದ ಶಾಂತಾ ನಿಲಜಕರ್ (75) ಮೃತ ದುರ್ದೈವಿ. ಬೆಳಗಾವಿ ಜಾಧವ ನಗರದಲ್ಲಿ ಪುತ್ರ ಸಿದರಾಯಿ ಲಕ್ಷ್ಮಣ ನೀಲಜಕರ್ ಚಿರತೆ ದಾಳಿಗೆ ಒಳಗಾದ ಸುದ್ದಿ ಕೇಳಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net