ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಒದಗಿಸಿ

2CBp3
Published on

ಚಿಕ್ಕಬಳ್ಳಾಪುರ : ಕಟ್ಟಕಡೆಯ ಫಲಾನುಭವಿಗೂ ಪ್ರಾಮಾಣಿಕವಾಗಿ ಸೌಲಭ್ಯ ಒದಗಿಸಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ.ವಿ. ಟೆಂಗಳಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿನ ಮಿನಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಪ್ರತಿಯೊಬ್ಬರಲ್ಲೂ ಸರ್ಕಾರಿ ಯೋಜನೆಗಳ ಬಗ್ಗೆ ಅರಿವಿರಬೇಕು. ಆಗ ಮಾತ್ರ ಅರ್ಹ ಫಲಾನುಭವಿಗಳನ್ನು ಸವಲತ್ತುಗಳು ತಲುಪಲು ಸಾಧ್ಯ. ನಿರ್ಗತಿಕ ಮಹಿಳೆಯರು, ಅಬಲೆಯರು, ಲಿಂಗತ್ವ ಅಲ್ಪಸಂಖ್ಯಾತರು, ವಿಧವೆಯರು ಸೇರಿ ಅನೇಕ ಮಹಿಳೆಯರು ಮಹಿಳಾ ಅಭಿವೃದ್ಧಿ ನಿಗಮದಿಂದ ಸಾಲ ಪಡೆದುಕೊಂಡು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಹಾಗೆಯೇ ಫಲಾನುಭವಿಗಳು ಸಾಲದ ಹಣವನ್ನು ಮರು ಪಾವತಿಸಬೇಕು. ಇದರಿಂದ ಇತರರು ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದರು.

ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಶೋಭಾ ಮಾತನಾಡಿ, ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಗರಿಷ್ಠ 3 ಲಕ್ಷದವರಿಗೆ ಸಾಲ ಮತ್ತು ಸಹಾಯಧನ ನೀಡುವ ಉದ್ಯೋಗಿನಿ ಯೋಜನೆಯಡಿ 2019-20ನೇ ಸಾಲಿನಲ್ಲಿ 73 ಫಲಾನುಭವಿಗಳಿಗೆ 76.60 ಲಕ್ಷ ರೂ ಸಹಾಯಧನ ಸಿಕ್ಕಿದೆ. ಸೀ ಶಕ್ತಿ ಸಂಘಗಳಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ಕಿರುಸಾಲ ಯೋಜನೆಯಡಿ 2 ಲಕ್ಷ ರೂ ಸಾಲ ನೀಡುತ್ತಿದ್ದು 20 ಕಂತುಗಳಲ್ಲಿ ತಲಾ 10 ಸಾವಿರ ರೂ ಸಾಲ ಮರು ಪಾವತಿಸಬಹುದು. 2019-20ನೇ ಸಾಲಿನಲ್ಲಿ 4 ಸ್ತ್ರೀಶಕ್ತಿ ಸಂಘಗಳಿಗೆ 8 ಲಕ್ಷ ರೂ. ಸಾಲ ಸಿಕ್ಕಿದೆ ಎಂದು ತಿಳಿಸಿದರು.

ಬೀದಿಬದಿ ವ್ಯಾಪಾರಿಗಳಿಗೆ ಹೆಚ್ಚಿನ ಬಡ್ಡಿಯ ಸಾಲದ ಶೋಷಣೆಗೊಳಗಾಗುವುದನ್ನು ತಪ್ಪಿಸಲು ಸಮೃದ್ಧಿ ಯೋಜನೆಯಡಿಯಲ್ಲಿ ತಲಾ 10 ಸಾವಿರ ರೂ.ಗಳಂತೆ 74 ಫಲಾನುಭವಿಗಳಿಗೆ ಪ್ರೋತ್ಸಾಹ ಧನ, ಚೇತನಾ ಯೋಜನೆಯಡಿ ಲೈಂಗಿಕವೃತ್ತಿ ನಿರತ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಸಬ್ಸಿಡಿ ದರದಲ್ಲಿ ತಲಾ 50 ಸಾವಿರ ರೂ. ಗಳನ್ನು 6 ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ, ಶಿಶು ಅಭಿವೃದ್ಧಿ ಘಟಕದ ಅಧಿಕಾರಿ ಮಹಮ್ಮದ್ ಉಸ್ಮಾನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net