ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

hdmc hubballi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೌಕರರು ಮಂಗಳವಾರ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಿದರು.

ಪಾಲಿಕೆಯ ಕೇಂದ್ರ ಕಚೇರಿ, ವಲಯ ಕಚೇರಿಗಳಲ್ಲಿ ನೌಕರರು ಕರ್ತವ್ಯದಿಂದ ದೂರ ಉಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಾಲಿಕೆಯ ಮುಖ್ಯ ಕಚೇರಿ ಸೇರಿದಂತೆ ಎಲ್ಲ ವಲಯ ಕಚೇರಿಗಳಿಗೂ ಬೀಗ ಹಾಕಲಾಗಿತ್ತು. ಇದರಿಂದಾಗಿ ವಿವಿಧ ಕೆಲಸಗಳಿಗಾಗಿ ಪಾಲಿಕೆ ಕಚೇರಿಗೆ ಬಂದ ಸಾರ್ವಜನಿಕರು ಪರದಾಡಬೇಕಾಯಿತು.

ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ವೇಳೆ ಹು-ಧಾ ಮಹಾನಗರ ಪಾಲಿಕೆ ನೌಕರರ ಸಂಘದ ಉಪಾಧ್ಯಕ್ಷ ಕೆ.ಪಿ.ಜಾಧವ ಮಾತನಾಡಿ, 7ನೇ ವೇತನ ಆಯೋಗದ ಸೌಲಭ್ಯವನ್ನು ಮಹಾನಗರ ಪಾಲಿಕೆಗಳ ನೌಕರರಿಗೂ ವಿಸ್ತರಿಸಲು ರಾಜ್ಯ ಸರ್ಕಾರ ಆರ್ಥಿ ಇಲಾಖೆಗೆ ಅನುದಾನ ಬಿಡುಗಡೆ ಮಾಡಬೇಕು. ಹು ಧಾ ಮಹಾನಗರ ಪಾಲಿಕೆಯಲ್ಲಿ ಸುಮಾರು 2 ಸಾವಿರ ನೌಕರರಿದ್ದು ಬೇಡಿಕೆಗಳನ್ನು ಈಡೇರಿಸುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದರು.

ಪಾಲಿಕೆಯ ಕಾಯಂ ಪೌರಕಾರ್ವಿುಕರು ಸೇರಿದಂತೆ ಎಲ್ಲ ನೌಕರರಿಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಸಬೇಕು. ಪಾಲಿಕೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತಂದು ಕರಡು ಮಸೂದೆ ಪ್ರಕಟಿಸಬೇಕು. ವೃಂದವಾರು ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ರಮೇಶ ಪಾಲಿಮ, ಮಂಜುನಾಥ ನಾಟೇಕರ, ಮಂಜುನಾಥ ನರಗುಂದ, ದೀಪಿಕಾ ಆರ್., ವಿದ್ಯಾ ಪಾಟೀಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net