ಕಗ್ಗೆರೆಯಲ್ಲಿಂದು ಬೆಳ್ಳಿಪಲ್ಲಕ್ಕಿ ಉತ್ಸವ : ಸಿದ್ದಲಿಂಗೇಶ್ವರರ ತಪೋಭೂಮಿ

11
Published on

ಕುಣಿಗಲ್: ಕಷ್ಟಗಳ ಪರಿಹಾರಕ್ಕಾಗಿ ಹರಕೆ ಮಾಡಿಕೊಂಡರೆ ಎಲ್ಲವೂ ಪರಿಹಾರವಾಗಲಿದೆ ಎಂದು ಭಕ್ತರು ನಂಬಿರುವ ಕಗ್ಗೆರೆಯಲ್ಲಿಂದು ಬೆಳ್ಳಿಪಲ್ಲಕ್ಕಿ ಉತ್ಸವ ನಡೆಯಲಿದೆ.

12 ವರ್ಷಗಳ ತಪ್ಪಸ್ಸಿನ ನಂತರ ಭಕ್ತರ ಹಾಲಿನ ಅಭಿಷೇಕದಿಂದ ಸಿದ್ದಲಿಂಗೇಶ್ವರರು ಹುತ್ತದಿಂದ ಹೊರ ಬಂದ ದಿನವನ್ನು ಆಧರಿಸಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ನಡೆಸಲಾಗುತ್ತದೆ. ಸಂಪ್ರದಾಯದಂತೆ ಬುಧವಾರ (ಮೇ 9ರಂದು) ಮಹಾರಥೋತ್ಸವ ಸಂಪನ್ನಗೊಂಡಿದೆ.

ಕಗ್ಗೆರೆಯಲ್ಲಿ ಸಿದ್ದಲಿಂಗೇಶ್ವರ ಇತಿಹಾಸ: 15ನೇ ಶತಮಾನದಲ್ಲಿ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿದ ಸಿದ್ದಲಿಂಗೇಶ್ವರರು 8ನೇ ವಯಸ್ಸಿನಲ್ಲೇ ಗೋಸಲ ಮಠದ ಚನ್ನಬಸವೇಶ್ವರ ಶಿವಯೋಗಿ ಸ್ವಾಮೀಜಿಗಳಿಂದ ಶಿವದೀಕ್ಷೆ ಪಡೆದು 701 ವಿರಕ್ತ ಶಿಷ್ಯರೊಂದಿಗೆ ದೇಶ ಪರ್ಯಟನೆ ನಡೆಸಿ ಕಗ್ಗೆರೆಗೆ ಆಗಮಿಸುತ್ತಾರೆ. ಇಲ್ಲಿನ ನಾಗಿನಿ ನದಿಯಲ್ಲಿ ಸ್ನಾನ ಮಾಡಿ ಶಿವ ಪೂಜೆಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಸಮಯದಲ್ಲಿ ಕಗ್ಗೆರೆಯ ನಂಬೆಣ್ಣ ಎಂಬ ಭಕ್ತ ಸಿದ್ದಲಿಂಗೇಶ್ವರರಿಗೆ ಬಿನ್ನಹದ ವೀಳ್ಯ ನೀಡಿ ಮನೆಗೆ ಬರುವಷ್ಟರಲ್ಲಿ ಕೆಂಚರೊಡ್ಡರೆಂಬ ಬೇಡರು ಕಗ್ಗೆರೆ ಮೇಲೆ ದಾಳಿ ಮಾಡಿದ ಪರಿಣಾಮ ನಂಬೆಣ್ಣ ಸಿದ್ದಲಿಂಗೇಶ್ವರರಿಗೆ ಬಿನ್ನಹ ಮಾಡಿಸದೇ ಊರಿನ ಜನರ ಜತೆ ಬೇರೆ ಊರಿಗೆ ಹೊರಟು ಹೋಗುತ್ತಾರೆ.

ಸಿದ್ದಲಿಂಗೇಶ್ವರರು 12 ವರ್ಷವಾದರೂ ತಪ್ಪಸ್ಸಿನಿಂದ ಹೊರ ಬಂದಿರುವುದಿಲ್ಲ. ಅವರ ಸುತ್ತ ಬೃಹದಾಕಾರದ ಹುತ್ತ ಬೆಳೆದುಕೊಂಡಿರುತ್ತದೆ. ಈ ಸಮಯದಲ್ಲಿ ನಂಬೆಣ್ಣ ಅವರ ಮನೆಯ ಹಸುವೇ ಪ್ರತಿ ದಿನ ಹುತ್ತಕ್ಕೆ ಹಾಲು ಸುರಿಸುತ್ತಿರುತ್ತದೆ. ಈ ವಿಷಯ ತಿಳಿದುಕೊಂಡ ನಂಬೆಣ್ಣ 12 ವರ್ಷದ ಹಿಂದಿನ ಬಿನ್ನಹ ನೆನಪಾಗಿ, ಓಡಿ ಬಂದು 701 ಬಿಂದಿಗೆ ಹಾಲು ಸುರಿದು ಹುತ್ತ ಕರಗಿಸಿ ತಪ್ಪನ್ನು ಮನ್ನಿಸುವಂತೆ ಸಿದ್ದಲಿಂಗೇಶ್ವರರನ್ನು ಪ್ರಾರ್ಥಿಸುತ್ತಾರೆ. 12 ವರ್ಷದ ಹಿಂದೆ ಮಾಡಿದ್ದ ಪ್ರಸಾದವನ್ನೇ ತರುವಂತೆ ಸ್ವಾಮಿಯವರು ಹೇಳಿದಾಗ ಅಂದು ಮಾಡಿದ ಪ್ರಸಾದ ಇಂದೂ ಮಾಡಿದ ಬಿಸಿ ಪ್ರಸಾದವಾಗಿಯೇ ಇರುತ್ತದೆ. ಈ ಪವಾಡ ನಡೆದ ದಿನವನ್ನೇ ಸ್ವಾಮಿಯ ಮಹಾರಥೋತ್ಸವ ನಡೆಸಲಾಗುತ್ತದೆ.

ಬೆಳ್ಳಿಪಲ್ಲಕ್ಕಿ ಉತ್ಸವಕ್ಕೆ ಸಿದ್ಧತೆ: ತಪೋಕ್ಷೇತ್ರ ಕಗ್ಗೆರೆಯಲ್ಲಿ ಬುಧವಾರ ಮಹಾರಥೋತ್ಸವ ನಡೆದಿದ್ದು, ಮುತ್ತಿನ ಪಲ್ಲಕ್ಕಿ ಹಾಗೂ ಬೆಳ್ಳಿ ಪಲ್ಲಕ್ಕಿಯೂ ಅದ್ದೂರಿಯಾಗಿ ನಡೆದಿದೆ. 12ರಂದು ರಾತ್ರಿ 10 ಗಂಟೆಗೆ ಬೆಳ್ಳಿಪಲ್ಲಕ್ಕಿ ಉತ್ಸವ ಆಯೋಜಿಸಲಾಗಿದೆ.

ಅಭಿವೃದ್ಧಿಯತ್ತ ಕಗ್ಗೆರೆ ಪುಣ್ಯಕ್ಷೇತ್ರ: ಕಗ್ಗೆರೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಭಕ್ತರಿಗಾಗಿ ದೇವಸ್ಥಾನ ಆಡಳಿತ ಮಂಡಳಿ ಒತ್ತು ನೀಡಿದೆ. ಎಡೆಯೂರು ಸೇರಿ ಕಗ್ಗೆರೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದು ದೇವಸ್ಥಾನದ ಆದಾಯ ಹೆಚ್ಚಳವಾಗಿದೆ. 8 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ, ಪಾಳು ಬಿದ್ದಿದ್ದ ದೇವಸ್ಥಾನದ ಜಮೀನಿನಲ್ಲಿ 700 ತೆಂಗಿನ ಸಸಿ ನೆಟ್ಟು ಹನಿ ನೀರಾವರಿ ಅಳವಡಿಕೆ, ಬಿಲ್ವವನ, ದೇವಸ್ಥಾನದಲ್ಲಿ ಹವಾನಿಯಂತ್ರಿತ ಯಂತ್ರಗಳ ಅಳವಡಿಕೆಯಾಗಿವೆ.

ದಾಸೋಹ ಮಹಾಮನೆಯಿಂದಲೂ ಅಭಿವೃದ್ಧಿ: ತೋಂಟದ ಸಿದ್ದಲಿಂಗೇಶ್ವರ ದಾಸೋಹ ಕೈಂಕರ್ಯ ಸೇವಾ ಸಮಿತಿಯಿಂದ ಕಗ್ಗೆರೆಯಲ್ಲಿಯೂ ನಿತ್ಯ ದಾಸೋಹ ನಡೆಯುತ್ತಿದೆ. ಸಮುದಾಯ ಭವನ ಹಾಗೂ ಭಕ್ತರು ಉಳಿದುಕೊಳ್ಳಲು ವಸತಿ ಕೊಠಡಿಗಳನ್ನು ನಿರ್ಮಾಣ ಮಾಡಿ ಮೂಲಸೌಕರ್ಯ ಒದಗಿಸಿದೆ. ಭಕ್ತರ ದೇಣಿಗೆಯಿಂದಲೇ ಭಕ್ತರಿಗಾಗಿ ದಾಸೋಹ ಮಹಾಮನೆ ನಿತ್ಯ ದಾಸೋಹ ನಡೆಯುತ್ತಿದೆ.

ನೀವೂ ಮಾಹಿತಿ ನೀಡಿ: ಧಾರ್ಮಿಕ-ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ‘ದೇಗುಲಗಳ ದರ್ಶನ’ ವಿಜಯವಾಣಿ ಪ್ರತಿವಾರ ನಿಮಗೆ ನೀಡುತ್ತಿದೆ. ಈ ಬಗ್ಗೆ ನೀವೂ ನಮಗೆ ಮಾಹಿತಿ ನೀಡಬಹುದು. ಸಂಪರ್ಕಿಸಿ: 8884431912, ಇಮೇಲ್: jagannathkalenahalli@gmail.com

ಕ್ಷೇತ್ರಕ್ಕೆ ತಲುಪುವುದು ಹೇಗೆ?: ಬೆಂಗಳೂರಿನಿಂದ ಕುಣಿಗಲ್‌ಗೆ ಆಗಮಿಸಿ 8 ಕಿಮೀ ಕ್ರಮಿಸಿದರೆ ಆಲಪ್ಪನಗುಡ್ಡೆ ಸಮೀಪದಲ್ಲಿ ಎರಡಕ್ಕೆ ತಿರುಗಿದರೆ ಕಗ್ಗರೆ ಕ್ಷೇತ್ರತಲುಪಬಹುದು. ಮೈಸೂರಿನಿಂದ ಮಂಡ್ಯ ಮಾರ್ಗವಾಗಿ ಮದ್ದೂರು ಮೂಲಕ ಹುಲಿಯೂರುದುರ್ಗದಿಂದ ಕುಣಿಗಲ್‌ಗೆ ಆಗಮಿಸಿ ಮತ್ತೆ ಕುಣಿಗಲ್‌ನಿಂದ ಆಲಪ್ಪನಗುಡ್ಡೆ ಸಮೀಪ ಎಡಕ್ಕೆ ತಿರುಗಿದರೆ ಕಗ್ಗೆರೆ ತಲುಪಬಹುದು. ಹಾಸನದಿಂದ ಎಡೆಯೂರು ಮೂಲಕ ಬೈಸ್‌ಪಾಸ್ ರಸ್ತೆಯಲ್ಲಿ ಬಂದರೆ ನಾಗೇಗೌಡನಪಾಳ್ಯ ಗೇಟ್ ಬಳಿ ಬಲಕ್ಕೆ ತಿರುಗಿದರೆ ಕಗ್ಗೆರೆ ತಲುಪಬಹುದು. ತುಮಕೂರಿನಿಂದ ಕುಣಿಗಲ್‌ಗೆ ಆಗಮಿಸಿ ನಂತರ ಅಲಪ್ಪನಗುಡ್ಡೆ ಸಮೀಪ ಅಂಡರ್ ಪಾಸ್ ಮೂಲಕ ಎಡಕ್ಕೆ ತಿರುಗಿದರೆ ಕಗ್ಗೆರೆ ಪುಣ್ಯಕ್ಷೇತ್ರ

ಎಡೆಯೂರು ಹಾಗೂ ಕಗ್ಗೆರೆ ಈ ಭಾಗದ ಪುಣ್ಯ ಹಾಗೂ ಪವಿತ್ರ ಕ್ಷೇತ್ರವಾಗಿದೆ. ಕಗ್ಗೆರೆ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ದೇವಸ್ಥಾನ ಇದೆ. ಇಲ್ಲಿಗೆ ಆಗಮಿಸಿದರೆ ಭಕ್ತರ ಮನಸ್ಸಿನ ದುಗುಡ ದುಮ್ಮಾನಗಳು ದೂರವಾಗಲಿವೆ, ಭಕ್ತರ ಹಾಗೂ ವ್ಯವಸ್ಥಾಪನಾ ಸಮಿತಿ ಸಹಕಾರದಿಂದ ಅಭಿವೃದ್ಧಿ ನಡೆಸಲಾಗಿದೆ. ಅಜಯ್ ಆಡಳಿತಾಧಿಕಾರಿ, ಕಗ್ಗೆರೆ ದೇವಸ್ಥಾನ ---------- ಎಡೆಯೂರು ದೇವಸ್ಥಾನದ ಅಡಳಿತ ಮಂಡಳಿ ಕಗ್ಗೆರೆ ಕ್ಷೇತ್ರಕ್ಕೂ ಈಗ ಹೆಚ್ಚು ಒತ್ತು ಕೊಟ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಇದರಿಂದ ಭಕ್ತರಿಗೆ ಮೂಲಸೌಕರ್ಯ ಸಮಸ್ಯೆ ಇಲ್ಲ. ಹೆಚ್ಚಿನ ಭಕ್ತರು ಆಗಮಿಸುತ್ತಿದ್ಧಾರೆ. ಹನುಮಂತಯ್ಯ, ವ್ಯವಸ್ಥಾಪಕ, ಕಗ್ಗೆರೆ.ತಲುಪಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net