

ಕುಮಟಾ: ತಾಲೂಕಿನ ಗಜನಿ ಪ್ರದೇಶದಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಪಾರಂಪರಿಕ ಕಗ್ಗ ಭತ್ತವಿಂದು ಅಳಿವಿನ ಅಂಚಿನಲ್ಲಿದೆ. ಆದರೆ, ಕಗ್ಗದ ಅನ್ನ ಉಂಡು ಬೆಳೆದ ವಿನಯ ಪಟಗಾರ ಅವರು ಇಂಜಿನಿಯರಿಂಗ್ ಕಲಿತರೂ ಊರು ಬಿಡದೇ ಕಗ್ಗ ಬೇಸಾಯ ಸಂರಕ್ಷಣೆಗೆ ಪಣ ತೊಟ್ಟಿದ್ದಾರೆ.
ಕಾಗಾಲದ ಗಜನಿ ಗದ್ದೆಗಳ ನಡುವೆ ಒಕ್ಕಲಿಗತನ ನೆಚ್ಚಿಕೊಂಡ ಕುಟುಂಬದ ಕುಡಿ ವಿನಯ ಕಲಿತಿದ್ದು ಸಿವಿಲ್ ಇಂಜಿನಿಯರಿಂಗ್. ಆದರೆ, ಇಂಜಿನಿಯರ್ ಉದ್ಯೋಗ ಬಿಟ್ಟು ಮನೆ ಸೇರಿದ ವಿನಯ, ಕಳೆದ ವರ್ಷ ಕೇವಲ ಒಂದೂವರೆ ಎಕರೆ ಎತ್ತರದ ಗದ್ದೆಯಲ್ಲಿ ಬಿಳಿ ಕಗ್ಗ ಬೆಳೆದಿದ್ದಾರೆ. ಬಳಿಕ ಶೇಂಗಾ, ಕಲ್ಲಂಗಡಿ ಬೆಳೆದಿದ್ದಾರೆ. ಏನೂ ಬೆಳೆಯದೇ ಹಾಳುಬಿದ್ದಿದ್ದ ಗದ್ದೆಯಲ್ಲಿ ಮೊದಲ ಪ್ರಯತ್ನದಲ್ಲೇ ಮೂರು ಬೆಳೆ ತೆಗೆದು ಅಲ್ಪ ಲಾಭವೂ ಆಗಿತ್ತು. ಹೀಗಾಗಿ ಈ ಬಾರಿ ತಮ್ಮ ಕುಟುಂಬದ ಮತ್ತು ಊರಿನ ಹಿರಿಯ ರೈತರ ಮಾರ್ಗದರ್ಶನದಲ್ಲಿ ಹೆಚ್ಚು ಶ್ರಮ ಬಯಸದ ಕಗ್ಗವನ್ನೇ 5 ಎಕರೆ ಹೊಂಡದ ಗದ್ದೆ ಪ್ರದೇಶದಲ್ಲಿ ಬೆಳೆದಿದ್ದು ಉತ್ತಮ ಫಸಲು ಬಂದಿದೆ. ಈ ಬಾರಿಯೂ ಶೇಂಗಾ ಹಾಗೂ ಕಲ್ಲಂಗಡಿ ಬೆಳೆಯುವ ಗುರಿ ಹೊಂದಿದ್ದಾರೆ.
ಬಾಡ, ಕಾಗಾಲ, ಮಿರ್ಜಾನ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಎಲ್ಲರೂ ಕೈಬಿಟ್ಟಿದ್ದ ಕಗ್ಗ ಕೃಷಿಯನ್ನು ಏಕೈಕ ವ್ಯಕ್ತಿಯಾಗಿ ಪುನಃ ಆರಂಭಿಸಿ ಉತ್ತಮ ಬೆಳೆ ಬೆಳೆದಿರುವುದು ವಿನಯ ಪಟಗಾರ ಸಾಧನೆಯೇ ಆಗಿದೆ.
ಕಡಿಮೆ ಖರ್ಚು: ತಾಲೂಕಿನಲ್ಲಿ ಕೆಲ ದಶಕಗಳ ಹಿಂದೆ ಸುಮಾರು 7000 ಎಕರೆ ಪ್ರದೇಶದಲ್ಲಿ ಕಗ್ಗ ಬೆಳೆಯುತ್ತಿದ್ದು ಕೇವಲ ಬಾಡ, ಕಾಗಾಲ, ಹೊಲನಗದ್ದೆ ಹಾಗೂ ಕೋಡ್ಕಣಿ ಪಂಚಾಯಿತಿಯ ಛತ್ರಕುರ್ವೆ ಗಜನಿ ಪ್ರದೇಶದಲ್ಲೇ 5,000 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಗ್ಗ ಬೇಸಾಯವಿತ್ತು. ಕಗ್ಗದಲ್ಲಿ ಬಿಳಿ ಹಾಗೂ ಕರಿ ಎಂಬ ಎರಡು ತಳಿಗಳಿದ್ದು ಕರಿಕಗ್ಗವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಸದಾ ಸಮುದ್ರ, ಹೊಳೆಯ ಉಪ್ಪು ಹಿನ್ನೀರು ಭರತ-ಇಳಿತ, ನೆರೆಯ ನೈಸರ್ಗಿಕ ವ್ಯವಸ್ಥೆಯಲ್ಲಿ ಕಗ್ಗ ಬೆಳೆದ ಬಳಿಕ ಅದೇ ಗದ್ದೆಗಳಲ್ಲಿ ವಿಫುಲವಾಗಿ ಸಿಗಡಿ, ಏಡಿ ಹಾಗೂ ಇತರ ಜಲಚರ ಸಂಪತ್ತು ಬೆಳೆಯುತ್ತಿತ್ತು. ಗಜನಿಯ ಬಂಡು ಹಾಗೂ ಜಂತ್ರಡಿ ವ್ಯವಸ್ಥೆಯ ಮೂಲಕ ಕೃಷಿ ಹಾಗೂ ಮೀನುಗಾರಿಕೆಯೆರಡೂ ಸುಸ್ಥಿರವಾಗಿ ನಿಯಂತ್ರಿಸಲ್ಪಟ್ಟು ರೈತರಲ್ಲಿ ಸಮೃದ್ಧಿ ತುಂಬಿರುತ್ತಿತ್ತು. ಕಗ್ಗ ಬೆಳೆಯಲ್ಲಿ ಹೆಚ್ಚಿನ ಹೂಡಿಕೆ ಇರುವುದಿಲ್ಲ. ಬೀಜ ದಾಸ್ತಾನು ಮಾಡಿಕೊಂಡು ಬಿತ್ತಲಾಗುತ್ತದೆ. ಯಾವುದೇ ಔಷಧ, ಗೊಬ್ಬರ, ಪಾಲನೆ- ಪೋಷಣೆಯಿಲ್ಲದೆ, ಉಪ್ಪು ನೀರು ಹಾಗೂ ಪ್ರವಾಹವನ್ನು ತಡೆದು ಬೆಳೆಯುತ್ತದೆ.
ವಿನಾಶದಂಚಿನ ತಳಿ: ಎಂ.ಎಸ್. ಸ್ವಾಮಿನಾಥನ್ ಫೌಂಡೇಷನ್, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಶಿವಮೊಗ್ಗ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಸಂಶೋಧಕ ಸಂಸ್ಥೆಗಳ ಪ್ರೋತ್ಸಾಹದ ನಡುವೆಯೂ ಹೊಲನಗದ್ದೆ ಪಂಚಾಯಿತಿ ವ್ಯಾಪ್ತಿಯ ನೂರು ಎಕರೆಯಲ್ಲಿ ಮಾತ್ರ ಕಗ್ಗ ಕೃಷಿ ಉಳಿದಿದೆ. ಕಗ್ಗವನ್ನು ವಿನಾಶದ ಅಂಚಿನಲ್ಲಿರುವ ತಳಿಯೆಂದು ಘೊಷಿಸಲು ಜೀವ ವೈವಿಧ್ಯ ಮಂಡಳಿ ಸಿದ್ಧವಾಗಿದೆ.
ಕಗ್ಗ ಯಾವುದೇ ಭೂಮಿಯಲ್ಲಿ ಬೇರು ಬಿಟ್ಟರೂ ಬದುಕಬಲ್ಲ ಸಾಮರ್ಥ್ಯ ಹೊಂದಿದೆ. ಕಗ್ಗಕ್ಕೆ ಬೇಡಿಕೆಯೂ ಹೆಚ್ಚಿದೆ. ಕಗ್ಗದ ಬಗ್ಗೆ ಸಂಶೋಧನೆಗಳು ನಡೆದರೆ ಸಾಲದು. ಸರ್ಕಾರ ರೈತರ ಬೆನ್ನಿಗೆ ನಿಂತು ಧೈರ್ಯ ತುಂಬಿ ಪ್ರೋತ್ಸಾಹಿಸಬೇಕು.| ಜಿ.ಕೆ. ಪಟಗಾರ ಪ್ರಗತಿಪರ ರೈತ ಕಾಗಾಲ
ಕುಮಟಾ ಕಗ್ಗಕ್ಕಷ್ಟೇ ಉಪ್ಪು ನೀರಿನ ಜತೆಗೆ ಪ್ರವಾಹವನ್ನು ತಡೆದುಕೊಳ್ಳುವ ಸಾಮರ್ಥ್ಯವಿದೆ. ಬೇರೆ ಪ್ರದೇಶದ ಕಗ್ಗದ ಮಾದರಿಯ ತಳಿ ಇಲ್ಲಿನ ಗಜನಿಯಲ್ಲಿ ಬೆಳೆಯುವುದಿಲ್ಲ. ಹೀಗಾಗಿ, ಕಗ್ಗದ ಬೀಜದ ಪೂರೈಕೆ ಸ್ಥಳೀಯ ರೈತರಿಂದಲೇ ಆಗಬೇಕಿದೆ. | ಡಾ. ಜಿ.ವಿ. ನಾಯಕ ಕೃಷಿ ಸಂಶೋಧನಾ ಕೇಂದ್ರ ಮುಖ್ಯಸ್ಥರು