ಬರ್ತ್‌ಡೇ ಸಂಭ್ರಮದಲ್ಲಿ ಮಾಜಿ ಸ್ಪೀಕರ್

10sgr2
ಕಾಗೋಡು ತಿಮ್ಮಪ್ಪ ಅವರ ಜನ್ಮದಿನದ ಅಂಗವಾಗಿ ಸಾಗರದ ಅವರ ನಿವಾಸದಲ್ಲಿ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದರು. ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಯು.ಶಿವಾನಂದ್, ಕುಟುಂಬದವರು ಇದ್ದರು.
Published on

ಸಾಗರ: ರಾಜಕೀಯ ಎನ್ನುವುದು ಅಧಿಕಾರ ಹಿಡಿಯುವ ಅಸ್ತ್ರವಾಗಬಾರದು. ಅದು ಸಮಾಜ ಸೇವೆಗೆ ಮೆಟ್ಟಿಲಾಗಬೇಕು ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.
ನಗರದಲ್ಲಿ ಕಾಂಗ್ರೆಸ್‌ನಿಂದ ಭಾನುವಾರ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ ಜನ್ಮದಿನದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಮ್ಮ ರಾಜಕೀಯದ ಹೆಜ್ಜೆಗೆ ಹೋರಾಟದ ಚರಿತ್ರೆ ಇದೆ. ಅದನ್ನು ಯಾರೂ ಮರೆಯಬಾರದು ಎಂದರು.
ದೇಶದ ಚರಿತ್ರೆಯನ್ನು ಗಮನಿಸಿದಾಗ ಜನರು ತಮ್ಮ ಹಕ್ಕನ್ನು ಹೋರಾಟದ ಮೂಲಕವೇ ಪಡೆದುಕೊಂಡಿದ್ದಾರೆ, ಅಧಿಕಾರ ಇರಲಿ ಇಲ್ಲದೆ ಇರಲಿ ನಾನು ಒಂದು ಸಿದ್ಧಾಂತಕ್ಕೆ ಅಂಟಿಕೊಂಡು ಬಂದವನು, ಅದನ್ನು ಪ್ರತಿಪಾದಿಸುತ್ತಲೇ ಬದುಕನ್ನು ಮುನ್ನಡೆಸಿದ್ದೇನೆ. ಲೋಹಿಯಾ ಅವರ ಚಿಂತನೆ, ಗೋಪಾಲಗೌಡರ ನಾಯಕತ್ವವೇ ನನ್ನ ರಾಜಕೀಯ ಜೀವನದ ಆದರ್ಶಗಳು. ಭೂಮಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಒಂದಿಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅದಕ್ಕೊಂದು ತಾರ್ತಿಕ ಅಂತ್ಯ ತಂದು ಕೊಟ್ಟಿದ್ದೇನೆ ಎನ್ನುವ ತೃಪ್ತಿ ನನಗೆ ಇದೆ. ಮಲೆನಾಡಿನಲ್ಲಿ ಇನ್ನೂ ಸಾಕಷ್ಟು ಭೂಮಿಗೆ ಸಂಬಂಧಿಸಿದ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ಕೆಲಸ ಆಗಬೇಕು. ಅದನ್ನು ಕಾನೂನಿನ ಮೂಲಕವಾಗಲಿ ಹೋರಾಟದ ಮೂಲಕವಾಗಲಿ ಜನರಿಗೆ ತಲುಪಿಸುವ ಕೆಲಸ ಆಗಬೇಕು ಎಂದ ಅವರು, ನನ್ನ ಜೀವನದಲ್ಲಿ ನಾನು ಎಂದಿಗೂ ಜನ್ಮದಿನವನ್ನು ಆಚರಿಸಿಕೊಂಡವನಲ್ಲ. ನಿಮ್ಮೆಲ್ಲರ ಪ್ರೀತಿಯ ಅಭಿಮಾನಕ್ಕೆ ಕಟ್ಟು ಬಿದ್ದಿದ್ದೇನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಭೂಹೀನರಿಗೆ ಭೂಮಿ ಕೊಡಿಸುವಲ್ಲಿ ಕಾಗೋಡು ತಿಮ್ಮಪ್ಪ ಅವರು ನಡೆಸಿದ ಹೋರಾಟ ಐತಿಹಾಸಿಕವಾದದು. ಅದನ್ನು ನಾವು ಎಂದಿಗೂ ಮರೆಯಬಾರದು. 16 ಸಾವಿರ ಕುಟುಂಬಗಳಿಗೆ ಭೂಮಿ ಕೊಡಿಸಿದ ಮಹಾನುಭಾವ ಅವರು. ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನ ನಮಗೆ ಬೇಕು. ಮಲೆನಾಡಿನ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಮ್ಮ ಪಕ್ಷ ಬರುವ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್‌ಬಾಬು, ಮಹಾಬಲ ಕೌತಿ, ತಾರಾಮೂರ್ತಿ, ಜಯರಾಮ್, ಗಿರೀಶ್ ಕೋವಿ, ಮೈಕಲ್ ಡಿಸೋಜಾ, ಡಿ.ದಿನೇಶ್, ಮಕ್ಬೂಲ್ ಅಹಮದ್, ಕೆ.ಹೊಳೆಪ್ಪ, ನಗರಸಭಾ ಸದಸ್ಯರಾದ ಮಧುಮಾಲತಿ, ಗಣಪತಿ ಮಂಡಗಳಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net