ಕಕ್ಷಿದಾರರ ಹಿತ ಕಾಪಾಡಿ

bkt-6-1
ಲೋಕಾಯುಕ್ತ ಬಿ.ಎಸ್.ಪಾಟೀಲ
Published on

ಬಾಗಲಕೋಟೆ: ಸ್ವಾರ್ಥ ಮುಂದೆ ಬಂದರೆ ಸಾಧನೆ ಹಿಂದೆ ಸರಿಯುತ್ತದೆ. ಸ್ವಾರ್ಥ ಹಿಂದೆ ಸರಿದರೆ ನೀವು ಮಾಡಿದ ಸಾಧನೆ ತಾನಾಗಿ ಹೊರ ಬರುತ್ತದೆ. ಅದು ಸ್ಪೂರ್ತಿ ಸೆಲೆಯಾಗುತ್ತದೆ. ವೃತ್ತಿ ಯಾವುದಾದರು ಇರಲಿ. ಅದರಕ್ಕೆ ಪರಿಶ್ರಮ, ಪೂರ್ವ ಸಿದ್ಧತೆ ಅಗತ್ಯ ಎಂದು ಲೋಕಾಯುಕ್ತ ಬಿ.ಎಸ್.ಪಾಟೀಲ ಹೇಳಿದರು.
ನಗರದ ಬಸವೇಶ್ವರ ಇಂಜಿನಿರಿಂಗ್ ಕಾಲೇಜಿನ ಸಭಾಭವನದಲ್ಲಿ ಶನಿವಾರ ಜಿ.ಎಸ್.ಛಬ್ಬಿ ಅಸೋಸಿಯೇಟ್ಸ್, ಜಿಲ್ಲಾ ವಕೀಲರ ಸಂಘ, ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯ ಸಹಯೋಗದಲ್ಲಿ ನಿವೃತ್ತ ನ್ಯಾಯಾಶ ಜಿ.ಎಚ್.ಛಬ್ಬಿ ಸಂಸ್ಮರಣಾ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರಿಗೂ ಸಾಧನೆ ಮಾಡುವ ಸಾಮಥ್ರ್ಯವಿದೆ. ಅದನ್ನು ಬಳಸಿಕೊಳ್ಳುವದಿಲ್ಲ. ಸಾಮಥ್ರ್ಯ ಅರಿತುಕೊಂಡು ಮುನ್ನಡೆಯಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡು ಮಾದರಿ ಆಯ್ಕೆ ಮಾಡಿಕೊಳ್ಳಬೇಕು. ನಿರಂತರ ಪರಿಶ್ರಮ, ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸರಳ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ಹೇಳುವ ವಿಷಯ ನಿಖರ ನಿರಳರ್ಗವಾಗಿ ಹೇಳಬೇಕು ಎಂದರು.
ಸಾಧನಕರಿಂದ ಯಾರಿಗೂ ಏನು ಆಗಬೇಕಿಲ್ಲ. ಅವರ ಸಾಗಿ ಬಂದ ಹಾದಿ ಅವಲೋಕನ ನಡೆಸಿದಾಗ ನಮಗೆ ಸ್ಪಷ್ಟವಾದ ಬೆಳಕು ಸಿಗುತ್ತದೆ. ಈ ಹಿಂದೆ ನ್ಯಾಯವಾದಿಗಳು ಬಹಳಷ್ಟು ಸಿದ್ಧತೆ ಮಾಡಿಕೊಂಡು ಕೋರ್ಟಗೆ ಬರುತ್ತಿದ್ದರು. ಇಂದು ಕಡಿಮೆಯಾಗುತ್ತಿದೆ. ತಯಾರಿ ಪರಿಪಕ್ವವಾಗಿಲ್ಲ. ಯುವ ನ್ಯಾಯಾಶರ ಬಳಿಯು ಈ ಕೊರತೆ ಕಾಡುತ್ತಿದೆ. ಪರಿಣಾಮ ಈ ಹಿಂದೆ ನ್ಯಾಯಾಲಯದ ತೀರ್ಪುಗಳು ನಾಲ್ಕು, ಐದು ಸಾಲುಗಳು ಮುಗಿಯುತ್ತಿದ್ದವು. ಇಂದು ನಾಲ್ಕು ಐದು ಪುಟಗಳಿಗೆ ಬಂದು ನಿಂತಿವೆ. ಹೀಗಾಗಿ ನಾವೆಲ್ಲ ಮೇದಾವಿಗಳ ಜೀವನ ಅರ್ಥಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನ್ಯಾಯಾಧೀಶ ಆರ್.ಬಿ.ಬೂದಿಹಾಳ ಮಾತನಾಡಿ, ಕರ್ಮ ಮಾಡಲಿಕ್ಕೆ ಕ್ರೇಡಿಟ್ ಇದೆ. ಫಲ ನಿರೀಕ್ಷೆ ಮಾಡಲು ನಮಗೆ ಹಕ್ಕಿಲ್ಲ. ಬಸವಣ್ಣನ ಕಾಯಕವೇ ಕೈಲಾಸ ಮೈಗೂಡಿಸಿಕೊಳ್ಳಬೇಕು. ಆಸಕ್ತಿ, ಅನಾಸಕ್ತಿ ಆಯ್ಕೆ ನಮ್ಮ ಕೈಯಲ್ಲಿದೆ. ಪ್ರತಿಯೊಬ್ಬರಿಗೂ ಒಂದೇ ರೀತಿಯ ಮೆದಳು ಇರುತ್ತದೆ. ಅದನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎನ್ನುವುದು ಮುಖ್ಯ. ಇಂದು ಯುವ ನ್ಯಾಯಾವಾದಿಗಳು ಕಕ್ಷಿದಾರರ ಹಿತಕಾಯಬೇಕು. ಅವರ ದೂರು, ದುಖಃ, ದುಮ್ಮಾನಗಳಿಗೆ ಧ್ವನಿಯಾಗಬೇಕು. ಆಸ್ತಿ ವಿವಾದ ಇಟ್ಟುಕೊಂಡು ಬಂದ ಕಕ್ಷಿದಾರರಿಗೆ ಗೆದ್ದರೆ ಆಸ್ತಿ ನನಗೆ. ಸೋತರೆ ಏನು ಕೊಡಬೇಡಾ ಅಂತ ವಕೀಲರು ಹೇಳಿದರೆ ಅದು ನಮ್ಮ ಕರ್ತವ್ಯವಲ್ಲ ಎಂದು ಕಿವಿ ಮಾತು ಹೇಳಿದರು.

ಶಾಸಕ ವೀರಣ್ಣ ಚರಂತಿಮಠ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜಿ.ಎಸ್.ಸೂಳಿಭಾವಿ, ನಂದಿಮಠ ಕಾಲೇಜಿನ ಪ್ರಾಚಾರ್ಯ ಎಂ.ಪಿ.ಚಂದ್ರಿಕಾ, ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ ವೇದಿಕೆ ಮೇಲೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net