ಕಕ್ಕೇರಾ ಪುರಸಭೆ ಚುನಾವಣೆ ಇಂದು

ydg04
Published on

ಕಕ್ಕೇರಾ: ಕಕ್ಕೇರಾ ಪುರಸಭೆಗೆ ಬುಧವಾರ ಚುನಾವಣೆ ನಡೆಯಲಿದ್ದು, ಚುನಾವಣಾಧಿಕಾರಿ ಕೆ.ವಿಜಯಕುಮಾರ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬಿಸಿಎ) ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಮೀಸಲಿದೆ. ೨೩ ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ ೧೭, ಬಿಜೆಪಿ ೬ ಸದಸ್ಯರನ್ನು ಹೊಂದಿದ್ದು, ಸ್ಪಷ್ಟ ಬಹುಮತವಿರುವ ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಲು ಕಾತರವಾಗಿದೆ. ಈ ಮೊದಲು ಗ್ರಾಮ ಪಂಚಾಯಿತಿ ಆಗಿದ್ದ ಪುರಸಭೆಗೆ ೨೦೧೬ರಲ್ಲಿ ಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದಾಗ ೨೩ ವಾರ್ಡ್ಗಳ ಪೈಕಿ ೧೦ ಕಾಂಗ್ರೆಸ್ ಮತ್ತು ೧೩ರಲ್ಲಿ ಬಿಜೆಪಿ ಗೆದ್ದಿತ್ತು. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಐದು ವರ್ಷ ಪೂರ್ಣ ಆಡಳಿತ ರುಚಿ ನೋಡಿದೆ.

ಮೀಸಲು ಪ್ರಕಟವಾದಾಗಿನಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಇಂತಿಷ್ಟು ಸದಸ್ಯರ ಬೆಂಬಲ ನಮಗಿದೆ ಎಂದು ತಮ್ಮ ಸಮುದಾಯದ ಮುಖಂಡರ ಮೂಲಕ ಶಾಸಕ ರಾಜಾ ವೇಣುಗೋಪಾಲ ನಾಯಕ ಮೇಲೆ ತೀವ್ರ ಒತ್ತಡ ಹೇರಿದ್ದರು. ಶಾಸಕರು ಮಂಗಳವಾರ ಕ್ಷೇತ್ರಕ್ಕೆ ಆಗಮಿಸುತ್ತಲೇ ೨ನೇ ಬಾರಿಗೆ ಪುರಸಭೆ ಸದಸ್ಯರ ಸಭೆ ನಡೆಸಿ ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ೧೫-೧೫ ತಿಂಗಳ ಅಧಿಕಾರ ಹಂಚಿಕೆ ಸೂತ್ರ ಹೆಣೆದಿದ್ದು, ಒಲ್ಲದ ಮನಸ್ಸಿನಿಂದ ಎಲ್ಲರೂ ಜೈ ಎಂದಿದ್ದಾರೆ ಎನ್ನಲಾಗುತ್ತಿದೆ.

ಎರಡೂವರೆ ವರ್ಷಗಳಿಂದ ಅಧಿಕಾರದ ಭಾಗ್ಯವಿಲ್ಲದೆ ನಮ್ಮ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯಗಳಾಗದೆ ಅಧಿಕಾರಿಗಳು ನಡೆಸಿz್ದೆÃ ಆಟ ಎನ್ನುತ್ತಿದ್ದ ಸದಸ್ಯರಿಗೆ ಈಗ ಆಡಳಿತ ನಡೆಸುವ ಅವಕಾಶ ಸಿಕ್ಕಿದೆ. ಬುಧವಾರ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಚೇರಿ ಸ್ವಚ್ಛವಾಗಿಸಿ ಪುರಸಭೆಗೆ ವಿದ್ಯುತ್ ದೀಪಾಲಂಕಾರ ಮಾಡಿ ಅಚ್ಚುಕಟ್ಟಾಗಿ ಸಭಾಭವನ ಸಿದ್ಧಪಡಿಸಿದ್ದು, ಸದಸ್ಯರಿಗಾಗಿ ೩೦ಕ್ಕೂ ಹೆಚ್ಚು ಹೊಸ ಮಾದರಿ ಕುರ್ಚಿಗಳನ್ನು ಹಾಕಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷರ ಚೆಂಬರ್ ಸಹ ಸಿದ್ಧಪಡಿಸಿದ್ದು, ಅವರು ಹೇಳಿದ ಬಣ್ಣ ನಂತರ ಬಳಿಸುವುದಾಗಿ ಮುಖ್ಯಾಧಿಕಾರಿ ಪ್ರವೀಣಕುಮಾರ ಬೋಗಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net