

ನಾಪೋಕ್ಲು: ಸಮೀಪದ ಕಕ್ಕಬೆ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಶನಿವಾರ ಕಕ್ಕಬೆಯಲ್ಲಿ ರಾಜ್ಯ ಮಟ್ಟದ ಈಜು ಸ್ಪರ್ಧೆ ಜರುಗಿತು. ಕೃಷಿ ಪತ್ತಿನ ಸಹಕಾರ ಸಂಘದ ಎದುರು ಇರುವ ಹೊಳೆಯಲ್ಲಿ ವಿವಿಧ ವಯೋಮಾನದವರಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯ ವಿವಿಧ ಭಾಗಗಳ ಬಾಲಕ-ಬಾಲಕಿಯರು, ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.
ಗ್ರಾಮೀಣ ಸಂಪನ್ಮೂಲ ಮುಂದಿನ ಪೀಳಿಗೆಗೆ ತಲುಪಲಿ : ಗ್ರಾಮೀಣ ಭಾಗದಲ್ಲಿ ಬೇಸಿಗೆಯ ರಜೆ ಸದುಪಯೋಗ ಆಗುವಂತಹ ಉತ್ತಮ ಕಾರ್ಯಕ್ರಮಗಳನ್ನು ಮಕ್ಕಳಿಗೆ ಆಯೋಜಿಸಲಾಗಿದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಕಾವೇರಪ್ಪ ಹೇಳಿದರು.
ಈಜು ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ರಿವರ್ ಸ್ವಿಮಿಂಗ್ ಕ್ಲಬ್ ಅಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ನೇತೃತ್ವದಲ್ಲಿ ಕಕ್ಕಬೆ ಹೊಳೆಯಲ್ಲಿ ಈಜು ಸ್ಪರ್ಧೆ ನಡೆಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಸಂಪನ್ಮೂಲವನ್ನು ಮುಂದಿನ ಪೀಳಿಗೆಗೆ ನೀಡುವಂತಾಗಲು ಯುವ ಜನಾಂಗ ಶ್ರಮಿಸಬೇಕು ಎಂದರು.
ಮಾಚಿಮಾಡ ರವೀಂದ್ರ ಮಾತನಾಡಿ, ಈಜು ಸ್ಪರ್ಧೆ ಕೊಡಗಿಗೆ ಹೊಸ ಅನುಭವ ತಂದಿದೆ. ಜಿಲ್ಲೆಯಲ್ಲಿನ ಪ್ರಕೃತಿಯನ್ನು ಆರಾಧಿಸುವ ಮಾನಸಿಕತೆಯನ್ನು ಇಂತಹ ಸ್ಪರ್ಧೆಗಳು ಬೆಳೆಸುತ್ತಿವೆ. ಪರಿಸರದ ಬಗ್ಗೆ ಕಾಳಜಿ ಬಳಸಲು ಕೂಡ ಇದು ಸಹಕಾರಿಯಾಗಿದೆ ಎಂದರು.
ಕಕ್ಕಬೆ ರಿವರ್ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಮಾತನಾಡಿ, ಕಕ್ಕಬ್ಬೆ ರಿವರ್ ಸ್ವಿಮ್ಮಿಂಗ್ ಕ್ಲಬ್ 2018ರಲ್ಲಿ ರಾಷ್ಟ್ರದಲ್ಲೇ ಪ್ರಥಮ ಎಂಬಂತೆ ರಿವರ್ ಸ್ವಿಮ್ಮಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು. ರಾಜ್ಯ ಹಾಗೂ ಇತರ ಭಾಗಗಳಿಂದ ನೂರಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಎರಡನೇ ವರ್ಷದ ಸ್ಪರ್ಧೆ 2022 ರಲ್ಲಿ ನಡೆಯಿತು. ಇದರಲ್ಲಿ 125 ಮಂದಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಇದೀಗ ಮೂರನೇ ವರ್ಷದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿವಿಧ ಭಾಗಗಳ 80 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ ಎಂದರು.
ಗೋಣಿಕೊಪ್ಪ ಅತ್ತೂರಿನ ನ್ಯಾಷನಲ್ ಅಕಾಡೆಮಿ ಸ್ಕೂಲ್ ಅಧ್ಯಕ್ಷೆ ನೆರವಂಡ ಶಾಂತಿ ಅಚ್ಚಪ್ಪ ಮಾತನಾಡಿದರು. ಕಾಫಿ ಬೆಳೆಗಾರರಾದ ಪಾಡೆಯಂಡ ಗಣೇಶ್, ಪಾಂಡಂಡ ನರೇಶ್,ಮಾದಂಡ ಉಮೇಶ್ ಬಿದ್ದಪ್ಪ, ಬಾಚಮಂಡ ಪ್ರಿಯ ಭರತ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಹಾಗೂ ರಾಜ್ಯದ ವಿವಿಧ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಅತಿಥಿಗಳು ಕಕ್ಕಬ್ಬೆ ಹೊಳೆಗೆ ಪುಷ್ಪ ಸಿಂಚನ ಮಾಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.