

ನಾಪೋಕ್ಲು: ಜಿಲ್ಲೆಯಲ್ಲಿ ಕಕ್ಕಡ ಮಾಸ ಅಥವಾ ಆಟಿ ತಿಂಗಳ 18ನೇ ದಿನವನ್ನು ಕಕ್ಕಡ ಪದಿನೆಟ್ ಆಗಿ ಆಚರಿಸಿಕೊಂಡು ಬಂದಿದ್ದು, ಆ.3 ರಂದು ಜಿಲ್ಲೆಯಾದ್ಯಂತ ಆಯುರ್ವೇದ ಜಾನಪದ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ.
ಕಕ್ಕಡ ತಿಂಗಳ 18ನೇ ದಿನ ವಿಶೇಷ. ಈ ತಿಂಗಳಲ್ಲಿ ಮದ್ದು ಸೊಪ್ಪಿನಿಂದ ತಯಾರಿಸಿದ ತಿನಿಸುಗಳಿಗೆ ವಿಶೇಷ ಬೇಡಿಕೆ ಇರುತ್ತದೆ. ಈ ಮದ್ದು ಸೊಪ್ಪು ಆಟಿ ಮಾಸ ಪ್ರಾರಂಭವಾದ 18ನೇ ದಿನದಂದು ಸುವಾಸನೆಯನ್ನು ಬೀರುತ್ತದೆ. ಔಷಧೀಯ ಗುಣಗಳನ್ನು ಮೈದುಂಬಿಕೊಂಡಿರುತ್ತದೆ. ಅಂದ ಆ ಸೊಪ್ಪನ್ನು ಬಳಸಿ ಅಕ್ಕಿಪಾಯಸ, ಹಿಟ್ಟು ಹೀಗೆ ಬಗೆಬಗೆಯ ಪದಾರ್ಥಗಳನ್ನು ತಯಾರಿಸುತ್ತಾರೆ. ಪಾಯಸಕ್ಕೆ ತೆಂಗಿನಕಾಯಿ ಮತ್ತು ತುಪ್ಪವನ್ನು ಹಾಕಿ, ಜೇನು ಸೇರಿಸಿ ತಿನ್ನುವುದು ರೂಢಿ. ಇದರ ಮೂಲ ಉದ್ದೇಶ ಸಿಹಿಯೊಂದಿಗೆ ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಚಳಿಯಿಂದ ರಕ್ಷಿಸುವುದಾಗಿದೆ. ಅದರಂತೆ, ಪಾಯಸ ಸೇವಿಸಿ ಒಂದು ಗಂಟೆಯ ನಂತರ ಮೂತ್ರ ವಿಸರ್ಜಿಸಿದರೆ ಕೆಂಪು ಬಣ್ಣದಿಂದ ಕೂಡಿರುತ್ತದೆ. ಇದೇ ಈ ಗಿಡದ ಗುಣ.
ಕನ್ನಡದ ಆಷಾಢ ಎಂಬ ಪದವೇ ಕೊಡವರ ಕಕ್ಕಡ ಹಾಗೂ ತುಳುವರ ಆಟಿ ಆಗಿದೆ. ಜಿಲ್ಲೆಯಲ್ಲಿ ಬಿರುಸಿನ ಮಳೆ, ಚಳಿ, ಗಾಳಿಗಳಿಂದ ಕೂಡಿರುವ ಹವಮಾನದಲ್ಲಿ ಮಾನವನ ದೇಹದ ಉಷ್ಣತೆಯ ಸಮತೋಲಕ್ಕಾಗಿ ಈ ಎಲ್ಲ ಪದಾರ್ಥಗಳನ್ನು ಸೇವಿಸಲಾಗುತ್ತದೆ. ಈ ಎಲ್ಲ ಪದಾರ್ಥಗಳು ಮಾನವನ ದೇಹದ ಉಷ್ಣಾಂಶ ಹೆಚ್ಚಿಸಲು ಸಹಾಯಕವಾಗುವ ತಿನಿಸುಗಳಾಗಿವೆ.