

ಬೀದರ್: ಬಳ್ಳಾರಿ ಹಾಗೂ ವಿಜಯನಗರ ಹೊರತುಪಡಿಸಿ ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಹಸಿರು ಹೊದಿಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿನ ಜಿಎನ್‌ಡಿ ಕಾಲೇಜು ಕ್ಯಾಂಪಸ್‌ನ ಗುರುನಾನಕ್ ಭವನ ಆವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಡಿ ಕಲ್ಯಾಣ ಕರ್ನಾಟಕ ಭಾಗದ ಪತ್ರಕರ್ತರಿಗೆ ಬುಧವಾರ ಆಯೋಜಿಸಿದ್ದ ಮಾಧ್ಯಮ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಆಮ್ಲಜನಿಕ ಕೊರತೆ ಆಗದಂತೆ ರಾಜ್ಯದಲ್ಲಿ ೧೫ ಕೋಟಿ, ಬೀದರ್ ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ ೩೫ ಲಕ್ಷ ಸಸಿ ನೆಡಲಾಗಿದೆ. ಪ್ಲಾಸ್ಟಿಕ್‌ಮುಕ್ತ ರಾಜ್ಯವಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಾಗತಿಕ ಆರೋಗ್ಯ ಸುಧಾರಣೆ, ಸಮರ್ಪಕ ಮಳೆ, ಪ್ರಕೃತಿ ವಿಕೋಪ ತಪ್ಪಿಸುವ ಕೀರ್ತಿ ಗಿಡ-ಮರಗಳಿಗೆ ಸಲ್ಲುತ್ತದೆ. ಪ್ರಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಈ ದೇಶದ ಪ್ರತಿಯೊಬ್ಬ ಪ್ರಜೆ ಮೇಲಿದೆ. ಆಮ್ಲಜನಿಕ ನಮ್ಮ ಪಾಲಿನ ಸಂಜೀವಿನಿ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಿಕ ಕೊರತೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಪರಿಸರ ಸಂರಕ್ಷಿಸುವುದು ಅತಿ ಜರೂರಿಯಾಗಿದೆ ಎಂದರು.
ಶಾಸಕಾAಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಜತೆಗೆ ಈ ಮೂರು ಅಂಗಗಳ ನ್ಯೂನತೆ ಎತ್ತಿ ಹಿಡಿದು ಪ್ರಗತಿದಾಯಕ ಕಾರ್ಯ ಮಾಡಿದರೆ ಮೆಚ್ಚುಗೆ ವ್ಯಕ್ತಪಡಿಸುವಂಥ ಕೆಲಸ ಮಾಧ್ಯಮಗಳು ಮಾಡುತ್ತವೆ. ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ ಎಂದು ಹೇಳಿದರು.
ಜನಾಭಿಪ್ರಾಯ ಮೂಡಿಸುವ ಕಾರ್ಯ ಮಾಧ್ಯಮ ರಂಗ ಮಾಡುತ್ತ ಬಂದಿದ್ದು ಶ್ರೇಷ್ಠ ಸೇವಾಕಾರ್ಯ. ಲೇಖನಿ ಖಡ್ಗಕ್ಕಿಂತ ಹರಿತವಾದದ್ದು. ಅದನ್ನು ಮಾಧ್ಯಮದವರು ಸದುಪಯೋಗ ಮಾಡಿಕೊಳ್ಳಬೇಕು. ಸತ್ಯ ಮರೆಮಾಚದೆ ಉತ್ತಮ ಕಾರ್ಯ ಮಾಡಬೇಕು. ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಜಗತ್ತಿನಲ್ಲಿ ಯಾರೂ ಪರಿಪೂರ್ಣ ಅಲ್ಲ. ಅದಕ್ಕಾಗಿ ನಿತ್ಯವೂ ಅಧ್ಯಯನ ಮಾಡಬೇಕು. ಕೃತಕ ಬುದ್ಧಿಮತ್ತೆಯಿಂದ ಅನೇಕ ಆತಂಕಗಳು ಎದುರಾಗಿದ್ದು, ನಿರುದ್ಯೋಗ ಸಮಸ್ಯೆ ಕಾಡುವ ಭಯ ಆವರಿಸಿದೆ. ಆದರೆ ಅದು ಆಗಲು ಸಾಧ್ಯವಿಲ್ಲ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಯಾವ ಸಿದ್ಧಾಂತದ ಮೇಲೆ ಮಾಧ್ಯಮ ನಡೆಯಬೇಕು ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ. ಅದರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅದನ್ನು ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಿಷ್ಪಕ್ಷಪಾತ, ಉತ್ತಮ ಉದ್ದೇಶ, ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿದರು. ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ ಡಾ.ಎಸ್. ಬಲಬೀರಸಿಂಗ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ, ಸದಸ್ಯರಾದ ರಶ್ಮಿ, ಅಬ್ಬಾಸ್ ಮುಲ್ಲಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಜಡಿಯಪ್ಪ ಕಲಬುರಗಿ, ಮಂಜುನಾಥ ಸುಳ್ಳೊಳ್ಳಿ ಬೀದರ್ ಇತರರಿದ್ದರು. ಕಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ೨೦೦ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿದ್ದರು.
ಕೌಶಲ ತರಬೇತಿಗಾಗಿ ನೆರವು: ಜಿಲ್ಲೆಯಲ್ಲಿ ಮಾಧ್ಯಮದವರಿಗೆ ತರಬೇತಿ ನೀಡಲು ಕೌಶಲ ಕೇಂದ್ರ ಸ್ಥಾಪನೆಗೆ ಒತ್ತು ನೀಡಿದಲ್ಲಿ ನಿವೇಶನ ಒದಗಿಸಿ ಅನುದಾನ ನೀಡಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ಕೇಂದ್ರ ಸ್ಥಾಪಿಸಿದರೆ ಸ್ಥಳೀಯ ಪತ್ರಕರ್ತರ ಕೌಶಲ ವೃದ್ಧಿಗೆ ಸಹಕಾರಿ ಆಗಲಿದೆ. ಪರಿಸರ ಸಂರಕ್ಷಣೆ ಸೇರಿ ಹತ್ತು ಹಲವು ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಧ್ಯಮ ಮಾಡುತ್ತಿದೆ. ಪ್ರಸ್ತುತ ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುವ ಅನಾಹುತಗಳ ಬಗ್ಗೆ ಜನರ ಗಮನಕ್ಕೆ ತರಬೇಕು. ಏಕಬಳಕೆ ಪ್ಲಾಸ್ಟಿಕ್‌ಮುಕ್ತ ಜಿಲ್ಲೆ, ರಾಜ್ಯ ಮಾಡಬೇಕಾಗಿದೆ. ಗಣೇಶ ಚತುರ್ಥಿಗೆ ಪಿಒಪಿ ಬದಲು ಮಣ್ಣಿನಿಂದ ಸಿದ್ಧಪಡಿಸಿದ ಪರಿಸರಸ್ನೇಹಿ ಗಣೇಶ ಕೂರಿಸಬೇಕು. ಧಾರ್ಮಿಕ ವಿಚಾರವುಳ್ಳ ಅನೇಕರು ಮಣ್ಣಿನ ಗಣಪತಿ ಬಳಸುತ್ತಾರೆ. ಜನರಿಗೆ ಮಾರಕವಾಗಿರುವ ಪಿಒಪಿ ಬದಲು ಮಣ್ಣಿನ ಗಣಪತಿ ಕೂರಿಸಿ ಪರಿಸರಸ್ನೇಹಿ ಉತ್ಸವ ನಡೆಸಬೇಕು ಎಂದು ಕರೆ ನೀಡಿದರು.
ಶರಣರು, ಸಂತರ ನಾಡಾದ ಗಡಿ ಜಿಲ್ಲೆ ಬೀದರ್‌ನಲ್ಲಿ ಮಾಧ್ಯಮ ಅಕಾಡೆಮಿ ಪತ್ರಕರ್ತರಿಗಾಗಿ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು ಸಂತಸದ ಸಂಗತಿ. ಮಾಧ್ಯಮ ಆಡಳಿತದ ನಾಲ್ಕನೇ ಅಂಗ. ನಿಖರವಾದ ಸುದ್ದಿಗಳನ್ನು ಬಿತ್ತರಿಸುವ ಮೂಲಕ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ
ಮಾಧ್ಯಮ ಮಿತ್ರರು ಜವಾಬ್ದಾರಿಯಿಂದ ನಿಖರವಾದ ಸುದ್ದಿ ಬಿತ್ತರಿಸುವ ಕಾರ್ಯ ಮಾಡಬೇಕಾಗಿದೆ. ಈ ಭಾಗದ ಪತ್ರಕರ್ತರಿಗೆ ತರಬೇತಿ ನೀಡಿ ಪ್ರೋತ್ಸಾಹಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ನಾಲ್ಕು ವಿಭಾಗದಲ್ಲೂ ಕಾರ್ಯಾಗಾರ ನಡೆಯಲಿದೆ.
| ಆಯೇಷಾ ಖಾನಂ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ
ಧರ್ಮಸ್ಥಳ ಅರಣ್ಯದಲ್ಲಿ ಸಮಾಧಿ ತನಿಖೆ ಬಳಿಕ ಕ್ರಮ: ಬೀದರ್: ಧರ್ಮಸ್ಥಳ ಸುತ್ತಮುತ್ತ ಮೀಸಲು ಅರಣ್ಯದೊಳಗೆ ಸಮಾಧಿ ಅಗೆಯುತ್ತಿರುವ ಎಸ್‌ಐಟಿಗೆ ಕೆಲವೆಡೆ ಮಾನವನ ಅಸ್ಥಿ ಸಿಕ್ಕಿದ್ದು, ತನಿಖೆ ಬಳಿಕ ಅಕ್ರಮವಾಗಿ ಶವ ಹೂತಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಅರಣ್ಯದಲ್ಲಿ ಅಕ್ರಮವಾಗಿ ಶವ ಹೂತಿರುವುದು ದೃಢಪಟ್ಟರೆ, ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತೋರಿದ ಅರಣ್ಯ ಅಧಿಕಾರಿ, ಸಿಬ್ಬಂದಿ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.