ಕಂಬಿ ಮಲ್ಲಯ್ಯ, ಪಾದಯಾತ್ರಿಗಳಿಗೆ ಶ್ರೀಶೈಲಕ್ಕೆ ಬಿಳ್ಕೋಡುಗೆ

Huvinahipparagi, Kambi Mallaya, Padayatri, Srishaila, Vadavadagi, Jodetta Bandi,
ಹೂವಿನಹಿಪ್ಪರಗಿ ಸಮೀಪದ ವಡವಡಗಿ ಗ್ರಾಮದಿಂದ ಕಂಬಿ ಮಲ್ಲಯ್ಯನನ್ನು ಹೊತ್ತು ಜೋಡೆತ್ತಿನ ಬಂಡಿಯಲ್ಲಿ ಭಕ್ತರು ಶ್ರೀಶೈಲಕ್ಕೆ ಪ್ರಯಾಣ ಆರಂಭಿಸಿದರು.
Published on

ಹೂವಿನಹಿಪ್ಪರಗಿ: ಸಮೀಪದ ವಡವಡಗಿ ಗ್ರಾಮದಿಂದ ಕಂಬಿ ಮಲ್ಲಯ್ಯನನ್ನು ಹೊತ್ತು ಪಾದಯಾತ್ರೆಯಲ್ಲಿ ಶ್ರೀಶೈಲಕ್ಕೆ ಹೋಗುವ ಭಕ್ತರನ್ನು ಮಂಗಳವಾರ ಜೋಡೆತ್ತಿನ ಬಂಡಿಗಳ ಮೂಲಕ ಬಿಳ್ಕೋಡಲಾಯಿತು.

ನೇತೃತ್ವ ವಹಿಸಿದ್ದ ಅಭಿ ಫೌಂಡೇಷನ್ ಸಂಸ್ಥಾಪಕ ಬಸವರಾಜ ಬಿರಾದಾರ ಮಾತನಾಡಿ, ಕಂಬಿ ಮಲ್ಲಯ್ಯನ ಗ್ರಾಮದ ಜೋಡೆತ್ತುಗಳ ಭಾವೈಕ್ಯದ ಸಂಕೇತವಾಗಿವೆ. ಗ್ರಾಮದಲ್ಲಿ ಜೊಡೆತ್ತುಗಳು ಸದಾ ಉಳಿಯಬೇಕು ಎಂಬ ಸಂದೇಶ ನೀಡುವವನಾಗಿದ್ದಾನೆ ಎಂದರು.

ಇಂದು ಜೋಡೆತ್ತು ಸಾಕಾಣಿಕೆದಾರರಿಗೆ ಪೂರಕವಾದ ಯೋಜನೆಗಳು ಇರದೇ ಇರುವ ಕಾರಣ ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಬರಗಾಲದ ಸಂದರ್ಭದಲ್ಲಿ ಅನೇಕ ರೈತರು ಎತ್ತುಗಳನ್ನು ಮಾರುವುದು ಸಾಮಾನ್ಯ. ಈ ಸಂದರ್ಭದಲ್ಲಿ ಎತ್ತುಗಳು ಕಾಸಾಯಿಖಾನೆಯ ಪಾಲಾಗುತ್ತಿರುವುದು ವಿಷಾಧಕರ ಸಂಗತಿ ಎಂದರು.

ಕಂಬಿ ಮಲ್ಲಯ್ಯ ಹಾಗೂ ಶ್ರೀಶೈಲ ಮಲ್ಲಯ್ಯ ನಮಗೆಲ್ಲ ಒಲಿಯಬೇಕಾದರೆ ನಾವು ಮೊದಲು ನಮ್ಮ ಗ್ರಾಮದ ಎತ್ತುಗಳ ಸಂತತಿ ಹೆಚ್ಚಿಸಲು ಸಂಕಲ್ಪ ಮಾಡಬೇಕು. ಎಲ್ಲರೂ ಒಂದಾಗಿ ಜೋಡೆತ್ತು ಸಾಕಾಣಿಕೆದಾರರಿಗೆ ಪೂರಕವಾದ ಯೋಜನೆ ಜಾರಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾಗಿದೆ. ಅಂದಾಗ ಮಾತ್ರ ನಮ್ಮ ಗ್ರಾಮದ ಅನ್ನ ಸಂಪತ್ತು ಉಳಿದು ಮುಂದಿನ ಪೀಳಿಗೆ ಉಳಿಯಲು ಸಾಧ್ಯ. ಇಲ್ಲವಾದರೇ ಮುಂದೆ ನಮ್ಮ ಮಕ್ಕಳು ತುತ್ತು ಅನ್ನಕ್ಕೂ ಕೂಡಾ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಅದಕ್ಕಾಗಿ ಕಂಬಿ ಮಲ್ಲಯ್ಯ ಎತ್ತುಗಳ ಸಂತತಿ ಉಳಿಸಿ ಸಕಲರನ್ನು ಕಾಪಾಡಲು ಗ್ರಾಮಗಳಲ್ಲಿ ಇರುವನು ಎಂಬ ಸಂದೇಶವನ್ನು ಬಹುಜನರಿಗೆ ತಲುಪಿಸಲು ನಂದಿಯಾತ್ರೆ ಅಭಿಯಾನ ಆರಂಭಿಸಲಾಗಿದೆ. ಸಿದ್ಧೇಶ್ವರ ಸ್ವಾಮೀಜಿಯವರ ಜನ್ಮ ಸ್ಥಳವಾದ ಬಿಜ್ಜರಗಿಯಿಂದ ಅಭಿಯಾನ ಆರಂಭವಾಗಿದೆ ಎಂದರು.

ಚನ್ನಮಲ್ಲಯ್ಯ ಮಠಪತಿ, ಬಸವರಾಜ ಅಳ್ಳಗಿ, ಬಸವರಾಜ ಮನಹಳ್ಳಿ, ವಿಜು ಕೊಳುರ ನೇತೃತ್ವದಲ್ಲಿ ವಡವಡಗಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ ಆರಂಭವಾಯಿತು. ಶಿವಕುಮಾರ ಮನಹಳ್ಳಿ, ಆನಂದ ಆಂದೇಲಿ, ಮಂಜು ಹಚರಡ್ಡಿ, ಬಸವರಾಜ ಹಚರಡ್ಡಿ, ಪ್ರಭು ಗಂಗಶೆಟ್ಟಿ, ಬಸವರಾಜ ಗಂಗಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net