

ಕಂಪ್ಲಿ: ತಾಲೂಕು ಕೇಂದ್ರದಲ್ಲಿ ಬಿಇಒ ಕಚೇರಿ ಆರಂಭಿಸುವ ಕುರಿತು ಪಟ್ಟಣದ ಸತ್ಯನಾರಾಯಣಪೇಟೆ ಸಹಿಪ್ರಾ ಶಾಲೆ ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಪ್ರಮುಖರ ಸಭೆ ಮಂಗಳವಾರ ನಡೆಯಿತು.
ಪುರಸಭಾಧ್ಯಕ್ಷ ಭಟ್ಟ ಪ್ರಸಾದ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪ್ಲಿ ಕಂದಾಯ ತಾಲೂಕು ಆಗಿದ್ದರೂ ಬಿಇಒ ಕಚೇರಿ ಇನ್ನೂ ಆರಂಭಗೊಂಡಿಲ್ಲ. ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಗೊಳ್ಳಬೇಕಿದೆ. ಶತಾಯಗತಾಯ ಕಂಪ್ಲಿಯಲ್ಲಿ ಬಿಇಒ ಕಚೇರಿಯನ್ನು ಆರಂಭಿಸುವಂತೆ ಒತ್ತಾಯಿಸಲು ಶಾಸಕರ ನೇತೃತ್ವದಲ್ಲಿ ಮೇಲಧಿಕಾರಿಗಳ ಬಳಿ ನಿಯೋಗ ತೆರಳುವುದು ಅಗತ್ಯವಾಗಿದೆ ಎಂದರು.
ಪ್ರಮುಖರಾದ ಜಿ.ರಾಮಣ್ಣ, ಎನ್.ಹಬೀಬ್ ರೆಹಮಾನ್, ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಸಿ.ಎ.ಚನ್ನಪ್ಪ ಮಾತನಾಡಿ, ಪ್ರತಿ ಸೌಲಭ್ಯವನ್ನು ಹೋರಾಟ ಮೂಲಕ ಪಡೆದುಕೊಳ್ಳುವಂತಾಗಿರುವುದು ಕಂಪ್ಲಿಯ ದುರ್ದೈವವಾಗಿದೆ. ತಾಲೂಕು ಕೇಂದ್ರದಲ್ಲಿ ಬಿಇಒ ಕಚೇರಿ ಆರಂಭಗೊಳ್ಳಬೇಕು. ಶಾಸಕರು ಮನಸ್ಸು ಮಾಡಿದಲ್ಲಿ ಬಿಇಒ ಕಚೇರಿ ಆರಂಭ ಕಷ್ಟವಿಲ್ಲ. 2024ರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಿಸುವುದಾಗಿ ಶಾಸಕ ಜೆ.ಎನ್.ಗಣೇಶ್ ಮಾತು ಕೊಟ್ಟಿದ್ದರು ಎಂದು ತಿಳಿಸಿದರು.
ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಬಿ.ದೇವೇಂದ್ರ, ವಿ.ವೆಂಕಟರಮಣ, ಟಿ.ಎಚ್.ಎಂ. ರಾಜಕುಮಾರ, ರಮೇಶ ಹೂಗಾರ ಇತರರಿರಿದ್ದರು.