ಕಂಪ್ಲಿ ಸೇತುವೆ ಮೇಲೆ ವಾಹನಗಳ ಸಂಚಾರ ಸ್ಥಗಿತ

27 KAMPLI 04
Published on

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಸಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದ ಗಂಗಾವತಿ ಸಂಪರ್ಕಿಸುವ ಸೇತುವೆ ಮೇಲೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರಭಾರ ತಹಸೀಲ್ದಾರ್ ನರಸಪ್ಪ, ತುಂಗಭದ್ರಾ ಜಲಾಶಯದಿಂದ ಮಧ್ಯಾಹ್ನ 1.10 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದಾಗಿ ಕಂಪ್ಲಿಯಿಂದ ಗಂಗಾವತಿ ಸಂಪರ್ಕಿಸುವ ಸೇತುವೆ ಮುಳುಗಡೆಗೊಳ್ಳಲಿದೆ . ನದಿಪಾತ್ರದ ನಾಲ್ಕು ಮೀನುಗಾರರ ಮನೆಗಳು ಜಲಾವೃತವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ತಳವಾರ ಓಣಿಯ ಸಹಿಪ್ರಾ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದ್ದು, ಸಂತ್ರಸ್ತರನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿದ್ದು ಸೋಮವಾರ 1.40 ಲಕ್ಷ ಕ್ಯೂಸೆಕ್ ನೀರು ಹರಿದು ಬರುವ ಸಾಧ್ಯತೆಯಿದೆ. ಇದರಿಂದಾಗಿ ನದಿಯಲ್ಲಿ ಪ್ರವಾಹ ಪ್ರಮಾಣ ಹೆಚ್ಚಾಗಲಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಸೇತುವೆ ಬಳಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಪೊಲೀಸ್, ಪುರಸಭೆ, ಕಂದಾಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ನದಿ ಪಾತ್ರದ ಪ್ರದೇಶವನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಬಿ.ವಾಸುಕುಮಾರ್, ಪಿಎಸ್‌ಐ ಅವಿನಾಶ್ ಕಾಂಬ್ಳೆ, ಕಂದಾಯ ಅಧಿಕಾರಿ ವೈ.ಎಂ.ಜಗದೀಶ್ ಇತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net