

ಕಂಪ್ಲಿ:ಇಲ್ಲಿನ ಪುರಸಭೆ ನಗರಸಭೆಯಾಗಿ ಯಾವಾಗ ಮೇಲ್ದರ್ಜೆಗೇರಲಿದೆ ಎಂಬ ನಿರೀಕ್ಷೆಯಲ್ಲಿ ಕಂಪ್ಲಿ ನಾಗರಿಕರು ಕಾಯುತ್ತಿದ್ದಾರೆ.
ಸ್ವಾತಂತ್ರೃ ಪೂರ್ವ ಅಂದರೆ 1938ರಲ್ಲಿ ಪಂಚಾಯಿತಿ ಬೋರ್ಡ್ ಆಗಿದ್ದ ಕಂಪ್ಲಿ, ನಂತರ 1973 ಅ.15ರಂದು ಪುರಸಭೆಯಾಗಿ ಮೇಲ್ದರ್ಜೆಗೇರಿತು. ಇದೀಗ ನಗರಸಭೆಯಾಗಿ ಮೇಲ್ದರ್ಜೆಗೇರುವ ಎಲ್ಲ ಅರ್ಹತೆಗಳನ್ನೊಂದಿದೆ. ಅಲ್ಲದೆ ಇದೇ ಮಾರ್ಚ್ 10ರಂದು ನಡೆದ ಪುರಸಭೆ ಸರ್ವ ಸದಸ್ಯರ ಸಭೆಯಲ್ಲೂ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, 23.64 ಚದುರ ಕಿಮೀ ವಿಸ್ತೀರ್ಣ ಹೊಂದಿದೆ.
2011ರ ಜನಗಣತಿ ಪ್ರಕಾರ 39,307 ಜನಸಂಖ್ಯೆಯಿದೆ. 12996 (ಕಟ್ಟಡ) ಆಸ್ತಿಗಳಿವೆ. 38 ಬಡಾವಣೆಗಳು ರೂಪುಗೊಂಡಿವೆ. ಅಭಿವೃದ್ಧಿಪಡಿಸಬೇಕಾದ 33 ಉದ್ಯಾನಗಳಿವೆ. ವಾರ್ಷಿಕ 1.80 ಕೋಟಿ ರ. ಆದಾಯವಿದೆ. ಶೇ.97 ಆಸ್ತಿ ತೆರಿಗೆ 1.65 ಕೋಟಿ ರೂ. ವಸೂಲಿಯಾಗುತ್ತಿದೆ. ಶೇ.60ಕ್ಕೂ ಹೆಚ್ಚು ಜನರು ಕೃಷಿಯೇತರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತುಂಗಭದ್ರಾ ನದಿ ತಟದಲ್ಲಿರುವುದರಿಂದ ಕುಡಿವ ನೀರಿಗೆ ತತ್ವಾರವಿಲ್ಲ. ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾದಾಗ ಮಾತ್ರ ನೀರು ಪೂರೈಕೆಗೆ ತೊಂದರೆಯಾಗುತ್ತದೆ.
ಪಟ್ಟಣದಲ್ಲಿ 8810 ನಳಗಳ ಸಂಪರ್ಕವಿದೆ. 35 ಲಕ್ಷ ಲೀಟರ್ ಸಾಮರ್ಥ್ಯದ ನಾಲ್ಕು ಓವರ್‌ಹೆಡ್ ಟ್ಯಾಂಕ್‌ಗಳಿವೆ. 89 ಸಿಸ್ಟನ್ ಟ್ಯಾಂಕ್‌ಗಳಿವೆ, 139 ಬೋರ್‌ವೆಲ್‌ಗಳಿವೆ. ದಿನಕ್ಕೆ ಪ್ರತಿ ವ್ಯಕ್ತಿಗೆ 135 ಲೀಟರ್‌ನಷ್ಟು ನೀರನ್ನು ಪೂರೈಸಲಾಗುತ್ತಿದೆ. ಆರೋಗ್ಯ ಇಲಾಖೆಯ ಮಾಹಿತಿಯಂತೆ ಪಟ್ಟಣದಲ್ಲಿ ಒಟ್ಟು 8,228 ಮನೆಗಳಿವೆ. 52,840 ಜನಸಂಖ್ಯೆಯಿದೆ. 5 ವರ್ಷದೊಳಗಿನ ಮಕ್ಕಳು 3,906 ಹಾಗೂ 19ವರ್ಷದೊಳಗಿನವರ ಸಂಖ್ಯೆ 17,419 ಆಗಿದೆ. ಹೀಗಾಗಿ ಪುರಸಭೆಯನ್ನು ಮೇಲ್ದರ್ಜೆಗೇರಿಸುವ ಜನಸಂಖ್ಯೆ, ವಿಸ್ತೀರ್ಣ ಸೇರಿ ಅಗತ್ಯ ಸೌಲಭ್ಯಗಳಿವೆ.
ಕಂಪ್ಲಿ ಪುರಸಭೆ ವ್ಯಾಪ್ತಿಯ ಅಂಚಿಗಿರುವ ನಂ.10ಮುದ್ದಾಪುರ, ಗೋಪಾಲಪುರ(ಕೊಟ್ಟಾಲ್), ಬೆಳಗೋಡ್‌ಹಾಳ್ ಭಾಗಗಳನ್ನು ಒಳಗೊಳ್ಳಲು ಅವಕಾಶವಿದ್ದು, ಈ ಪ್ರದೇಶಗಳು ನಗರಸಭೆಗೆ ಸೇರುವುದರಿಂದ ಅಭಿವೃದ್ಧಿ ವೇಗ ಹೆಚ್ಚುತ್ತದೆ. ಹೆಚ್ಚಿನ ಸಿಬ್ಬಂದಿ ದೊರಕಲು ಸಾಧ್ಯವಾಗುತ್ತದೆ. ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತದೆ. ಮೇಲಾಗಿ ನಗರಸಭೆಯಾದಲ್ಲಿ ವಾರ್ಷಿಕ 35 ಕೋಟಿ ರೂ.ಗೂ ಹೆಚ್ಚು ಅನುದಾನ ಸಿಗಲಿದೆ. ಇದರಿಂದ ಜನರಿಗೆ ಮೂಲಸೌಕರ್ಯ ಒದಗಿಸಬಹುದು. ವ್ಯಾಪಾರ ವ್ಯವಹಾರ ಅಭಿವೃದ್ಧಿಗೊಳ್ಳುತ್ತದೆ. ಜನತೆಯ ಆಸ್ತಿಯ ಮಾರುಕಟ್ಟೆ ಮೌಲ್ಯ ಅಧಿಕಗೊಳ್ಳುತ್ತದೆ.
ಪುರಸಭೆ ಸರ್ವ ಸದಸ್ಯರ ಸಭೆಯಲ್ಲಿ ಠರಾವ್ ಪಾಸ್ ಆಗಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಲಿಲ್ಲ. 33 ವಾರ್ಡ್‌ಗಳನ್ನಾಗಿ ವಿಂಗಡಿಸಬಹುದು. 2050 ರತನಕ ದೂರದೃಷ್ಟಿಯನ್ನಿರಿಸಿ ನದಿಯಲ್ಲಿ ಕುಡಿವ ನೀರಿನ ಜಾಕ್‌ವೆಲ್ ರೂಪಿಸಲಾಗಿದೆ. ಪಟ್ಟಣ ಇನ್ನಷ್ಟು ಸುಂದರವಾಗಿ ಬೆಳೆಯಲು ಸಾಧ್ಯವಿದೆ. ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ಚಾಲನೆ ನೀಡುವ ಶಕ್ತಿಯ ಅಗತ್ಯವಿದೆ. ಕಂಪ್ಲಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಬೇಕು.ಡಾ.ಎನ್.ಶಿವಲಿಂಗಪ್ಪ,ಪುರಸಭೆ ಮುಖ್ಯಾಧಿಕಾರಿ, ಕಂಪ್ಲಿ ಸಭೆಯಲ್ಲಿ ಒಕ್ಕೊರಲಿನಿಂದ ಠರಾವ್ ಪಾಸ್ ಮಾಡಿದ್ದು, ಚುನಾವಣೆ ಬಂದಿದ್ದರಿಂದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಮುಂದಿನ ದಿನಗಳಲ್ಲಿ ನಗರಸಭೆ ಮೇಲ್ದರ್ಜೆಗೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು.ಶಾಂತಲಾ ವಿ.ವಿದ್ಯಾಧರ, ಮಾಜಿ ಅಧ್ಯಕ್ಷೆ, ಪುರಸಭೆ, ಕಂಪ್ಲಿ. ಕಂಪ್ಲಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಚುನಾವಣೆ ಮುಂಚೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪುರಸಭೆ ಸದಸ್ಯರಿಗೆ ಸೂಚಿಸಿದ್ದೆ. ಇದೀಗ ಪ್ರಸ್ತಾವನೆ ಸಲ್ಲಿಸಿ ಮುಂದಿನ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು.ಜೆ.ಎನ್.ಗಣೇಶ್, ಶಾಸಕ, ಕಂಪ್ಲಿ.