ಕಂಪನಿಗಳಿಗಾಗಿ ಭೂಸ್ವಾಧಿನ ಸಲ್ಲ

16_
Published on

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್​.ಮಂಜುನಾಥ್​ ಹೇಳಿಕೆ

ಕುಣಿಗಲ್​: ಸರ್ಕಾರ ಕಾರ್ಖಾನೆಗಳ ನಿಮಾರ್ಣಕ್ಕೆ ರೈತರ ಜಮೀನು ಸ್ವಾಧಿನ ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ. ದೇಶದ ಜನರಿಗಾಗಿ ಆಹಾರ ಧಾನ್ಯ ನೀಡಲು ಕೃಷಿ ಭೂಮಿಯೇ ಕಾರಣ. ಆದ್ದರಿಂದ ಹಾಲಿ ಇರುವ ಇಂಡಸ್ಟ್ರಿಯಲ್​ ಏರಿಯಾಗಗಳೇ ಸಾಕು ಎಂದು ಸಂಸದ ಡಾ.ಸಿ.ಎನ್​.ಮಂಜುನಾಥ್​ ತಿಳಿಸಿದರು.

ತಾಲೂಕಿನ ಭಕ್ತರಹಳ್ಳಿ ಹಾಗೂ ಸಂತೆಮಾವತ್ತೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಪ್ರಧಾನಮಂತ್ರಿ ಕಿಸಾನ್​ ಯೋಜನೆಯಡಿ ರೈತರಿಗೆ 40 ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ. ಬೆಳೆ ವಿಮೆ ಯೋಜನೆಗೆ 6,500 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಬೆಂಗಳೂರು ಸುತ್ತ ರಿಂಗ್​ ರಸ್ತೆ ನಿಮಾರ್ಣಕ್ಕೆ 4,750 ಕೋಟಿ ರೂ., ಜಲ ಜೀವನ ಯೋಜನೆಗೆ 5100 ಕೋಟಿ ಹಾಗೂ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ ಎಂದ ಅವರು, ಕಾಡು ಪ್ರಾಣಿ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟರೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇಬ್ಬರೂ ಮನುಷ್ಯರೇ, ಇಬ್ಬರಿಗೂ ಒಂದೇ ರೀತಿಯ ಪರಿಹಾರ ನೀಡಬೇಕೆಂದು ಕಲಾಪದಲ್ಲಿ ಒತ್ತಾಯಿಸಿದ್ದೇನೆ ಎಂದರು.ಜಿಪಂ ಮಾಜಿ ಅಧ್ಯಕ್ಷ ವೈ.ಎಚ್​.ಹುಚ್ಚಯ್ಯ, ಕಸಬಾ ಹೋಬಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮಹರಾಷ್ಟ್ರ ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್​, ವಕ್ತಾರ ತರೀಕೆರೆ ಪ್ರಕಾಶ್​ ಇದ್ದರು.

ಶಿಸ್ತಿನ ವಿದ್ಯಾರ್ಥಿ: ಸಂಸತ್ತಿನಲ್ಲಿ ನಾನು ಶಿಸ್ತಿನ ವಿದ್ಯಾರ್ಥಿಯಾಗಿರಬೇಕು. ಕಲಾಪಕ್ಕೆ ತಪ್ಪಿಸಿಕೊಳ್ಳಬಾರದೆಂದು ನಿರ್ಧಾರ ಮಾಡಿದ್ದೇನೆ. ಉಳಿದ ಸಮಯದಲ್ಲಿ ನಿಮ್ಮನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸುತ್ತೇನೆ. ದೇಶವನ್ನು ಯಾವ ರೀತಿ ಮುನ್ನಡೆಸಬೇಕು. ಕಾರ್ಮಿಕರ ಬದುಕನ್ನು ಹೇಗೆ ಬದಲಾವಣೆ ಮಾಡಬೇಕು ಎಂಬುದು ನಮ್ಮ ಜವಾಬ್ದಾರಿಯಾಗಿದೆ. ಈ ಬಗ್ಗೆ ಸಂಸತ್​ ಕಲಾಪದಲ್ಲಿ ಎಲ್ಲವೂ ಚರ್ಚೆಯಾಗಲಿದೆ ಎಂದು ಸಂಸದರು ತಿಳಿಸಿದರು.

ಅಧಿಕಾರಿಗಳ ಸ್ಪಂದನೆ ಇಲ್ಲ: ಜನ ಸ್ಪಂದನ ಕಾರ್ಯಕ್ರಮಕ್ಕೆ ತಾಲೂಕುಮಟ್ಟದ ಅಧಿಕಾರಿಗಳ ಗೈರು ಆಕ್ರೋಶಕ್ಕೆ ಕಾರಣವಾಯಿತು. ಅಧಿಕಾರಿಗಳೇ ಇಲ್ಲದಿದ್ದರೇ ಜನರ ಸಮಸ್ಯೆ ಬಗೆಹರಿಸುವುದಾದರೂ ಹೇಗೆ?, ಕ್ಷೇತ್ರದ ಶಾಸಕರು, ಸಂಸದರ ಸಭೆಗೆ ಅಧಿಕಾರಿಗಳು ಹೋಗದಂತೆ ತಾಕೀತು ಮಾಡಿ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಸಭೆಯ ಭಾಷಣಗಳಲ್ಲಿ ಮೈತ್ರಿ ಪಕ್ಷದ ಮುಖಂಡರು ವಾಗ್ದಾಳಿ ನಡೆಸಿದರು.

ಜವಾಬ್ದಾರಿ ಅರಿತು ಕೆಲಸ ಮಾಡಿ: ಕಂದಾಯ, ಪೊಲೀಸ್​, ಆರೋಗ್ಯ ಹಾಗೂ ಕೃಷಿ ಇಲಾಖೆಗಳು ಅವರ ಜವಾಬ್ದಾರಿ ಅರಿತು ಸಮರ್ಪಕವಾಗಿ ಕೆಲಸ ಮಾಡಿದರೆ ಜನ ರಾಜಕಾರಣಿಯ ಬಳಿ ಹೋಗಿ ಕೆಲಸ ಮಾಡಿಕೊಡಿ ಎಂದು ಕೇಳಬೇಕಾಗುವುದಿಲ್ಲ ಎಂದು ಡಾ.ಸಿ.ಎನ್​.ಮಂಜುನಾಥ್​ ತಿಳಿಸಿದರು.

ರಾಜಕೀಯ ಸಂಸತಿ ಬದಲಾಗಲಿ: ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕು. ನಂತರ ಎಲ್ಲರೂ ಒಂದೇ ಎಂದು ಭಾವಿಸಬೇಕು. ನೀರು, ರಸ್ತೆ, ಸರ್ಕಾರದ ಸೌಲಭ್ಯಗಳು ಎಲ್ಲ ಪಕ್ಷದವರಿಗೆ ದೊರೆಯುವಂತೆ ಕೆಲಸ ಮಾಡಬೇಕು. ರಾಜಕೀಯ ಬದಿಗಿಟ್ಟು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಂಸದರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net