ಕಂದಾಯಾಧಿಕಾರಿ ಮೇಲೆ ಹಲ್ಲೆ ಎಫ್‌ಐಆರ್ ದಾಖಲು

Halle
Published on

ಚಿತ್ರದುರ್ಗ: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕಂದಾಯ ನಿರೀಕ್ಷಕ ಎಚ್.ಪ್ರಾಣೇಶ್ ಅವರ ಮೇಲೆ ಹಲ್ಲೆಗೆ ಮುಂದಾದ ಗ್ರಾಮದ ಶಿವಶಂಕರ್, ವಿದ್ಯಾಶಂಕರ್ ಎಂಬುವರ ವಿರುದ್ಧ ಮಂಗಳವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ: ಜಮೀನು ದಾರಿ ವಿವಾದ ಹಿನ್ನೆಲೆ ಪರಿಶೀಲನೆಗೆ ಕಂದಾಯ ನಿರೀಕ್ಷಕ ಎಚ್.ಪ್ರಾಣೇಶ್, ಮಲ್ಲಾಪುರ ಗ್ರಾಮ ಲೆಕ್ಕಾಧಿಕಾರಿ ಯಶೋಧ, ಗ್ರಾಮ ಸಹಾಯಕ ವಿಜಯಕುಮಾರ್ ಅವರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ಅವರ ಸಮ್ಮುಖದಲ್ಲೇ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ.

ಜಮೀನಿಗೆ ಸಂಚರಿಸಲು ಮತ್ತೊಬ್ಬರಿಗೆ ಅಡ್ಡಿಪಡಿಸುವುದು ಸರಿಯಲ್ಲ. ದಾರಿ ಮಾಡಿಕೊಡುವಂತೆ ತಹಸೀಲ್ದಾರ್ ಸೂಚಿಸಿದರು. ನಿಮ್ಮ ಮಾತು ಕೇಳಲು ಸಾಧ್ಯವಿಲ್ಲವೆಂದು ಶಿವಶಂಕರ್, ವಿದ್ಯಾಶಂಕರ್ ಹೇಳಿದರು.

ಸಾರ್ವಜನಿಕ ರಸ್ತೆಗೆ ಅಡ್ಡಿಪಡಿಸಬಾರದೆಂದು ಮನವೊಲಿಸಲು ಪ್ರಯತ್ನಿಸಿದರೂ ಮಾತು ಕೇಳದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರೈತರ ಮನವಿ ಮೇರೆಗೆ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಸರ್ಕಾರಿ ಕೆಲಸ ನಿರ್ವಹಿಸಲು ಅಡ್ಡಿಪಡಿಸಿದ್ದ ಹಾಗೂ ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಾ.ನಾಗವೇಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net