ಕಂದಾಯ ಸಚಿವರ ಗ್ರಾಮ ವಾಸ್ತವ್ಯ : ವಿಜಯವಾಣಿ ಪತ್ರಿಕೆ ಓದುವುದರೊಂದಿಗೆ ದಿನದ ಆರಂಭ, ಬೀದಿಬದಿ ಅಂಗಡಿಯಲ್ಲಿ ಚಹಾ ಸೇವನೆ

2
Published on

ತುರುವೇಕೆರೆ: ತಾಲೂಕಿನ ಮಾಯಸಂದ್ರದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಮಾಡಿದ್ದ ಕಂದಾಯ ಸಚಿವ ಆರ್​. ಅಶೋಕ್​ ಭಾನುವಾರ ಬೆಳಗ್ಗೆಯೂ ಗ್ರಾಮದಲ್ಲಿ ಸುತ್ತಾಡಿ ಗಮನ ಸೆಳೆದರು.

ಟಿ.ಬಿ. ಕ್ರಾಸ್​ ಆದಿಚುಂಚನಗಿರಿ ಮಠದ ಆಶ್ರಮ ಶಾಲೆಯಲ್ಲಿ ಶನಿವಾರ ತಂಗಿದ್ದ ಅವರು ಭಾನುವಾರ ಬೆಳಗ್ಗೆ ಎದ್ದ ಕೂಡಲೇ ವಿಜಯವಾಣಿ ಪತ್ರಿಕೆ ಓದಿದರು.

ಬೆಳಗ್ಗೆ 6ಕ್ಕೆ ಗ್ರಾಮದಲ್ಲಿ ವಾಯುವಿಹಾರ ಮಾಡಿದ ಅವರು ಸ್ಥಳಿಯರ ಜತೆಗೆ ಮಾತುಕತೆ ನಡೆಸಿದರು. ಕಂದಾಯ ಇಲಾಖೆ ಸುಧಾರಣೆ ಹಾಗೂ ಸ್ಥಳಿಯವಾಗಿ ಆಗುವ ಸಮಸ್ಯೆಗಳ ಬಗ್ಗೆ ಜನರಿಂದ ಮಾಹಿತಿ ಪಡೆದರು.

ಸಂತೆ ಬೀದಿಯ ರಸ್ತೆ ಬದಿಯ ಚಹಾದಂಗಡಿಯಲ್ಲಿ ಟೀ ಸೇವಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದಲ್ಲಿನ ಪೌತಿ ಖಾತೆಯ ಸಮಸ್ಯೆಗಳಿಗೆ ಸದ್ಯದಲ್ಲೇ ಮುಕ್ತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಂದಾಯ ಇಲಾಖೆಯಲ್ಲಿ ಸಾಕಷ್ಟು ಬದಾಲಾವಣೆ ತರಲಾಗಿದೆ. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಲು ಗ್ರಾಮ ವಾಸ್ತವ್ಯದ ಮೂಲಕ ಜನರ ಬಳಿಗೇ ಅಧಿಕಾರಿಗಳೇ ತೆರಳುವಂತೆ ಮಾಡಿ, ತಕ್ಷಣವೇ ಪರಿಹಾರ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಮಾಯಸಂದ್ರ ಸೇರಿ ನಾನು ವಾಸ್ತವ್ಯ ಮಾಡಿರುವ ಬಹುತೇಕ ಕಡೆಗಳಲ್ಲಿ ಜನರು ಪೌತಿ ಖಾತೆ ಬಗ್ಗೆ ಸಾಕಷ್ಟು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಅದನ್ನು ಸರಿಪಡಿಸಲು ಅಗತ್ಯ ಕ್ರಮವನ್ನು ತಕ್ಷಣವೇ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗ್ರಾಮಸಭೆಯಲ್ಲೇ ಖಾತೆ ಬದಲಾವಣೆ, ಆರ್​ಟಿಸಿ ತಿದ್ದುಪಡಿಗೆ ಎಸಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು, ಗ್ರಾಮಸಭೆಯಲ್ಲಿ ಗ್ರಾಮಸ್ಥರ ಎದುರು ರ್ಚಿಚಿಸಿ ಅಲ್ಲಿಯೇ ಸಮಸ್ಯೆ ಬಗೆಹರಿದರೆ ಜನರು ಕಚೇರಿಗೆ ಅಲೆಯುವುದು ತಪ್ಪುತ್ತದೆ ಎಂದರು.

ಶಾಸಕ ಮಸಾಲಾ ಜಯರಾಂ, ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಸಾಥ್​ ನೀಡಿದರು. ರಾಜ್ಯಸಭಾ ಸದಸ್ಯ ಜಗ್ಗೇಶ್​ ಶನಿವಾರ ವೇದಿಕೆ ಕಾರ್ಯಕ್ರಮ ಮುಗಿಸಿಕೊಂಡು ನಿರ್ಗಮಿಸಿದ್ದರು.

ಚಹಾಕ್ಕೆ 500 ರೂ. ಕೊಟ್ಟ ಸಚಿವ: ವಾಸ್ತವ್ಯ ಹೂಡಿದ್ದ ಆಶ್ರಮ ಶಾಲೆಯಿಂದ ಭಾನುವಾರ ಬೆಳಗ್ಗೆ ವಾಯುವಿಹಾರ ಕೈಗೊಳ್ಳುವ ಮೂಲಕ ಸ್ಥಳಿಯ ಜನರನ್ನು ಮಾತನಾಡಿಸಿ ಸಮಸ್ಯೆ ಅರಿಯಲು ಆರ್​.ಅಶೋಕ್​ ಮುಂದಾದರು. ಟಿ.ಬಿ.ಕ್ರಾಸ್​ ಸರ್ಕಲ್​ಗೆ ಬಂದ ಅವರು ಸುರೇಶ್​ ಎಂಬುವರ ರಸ್ತೆ ಬದಿಯ ಗೂಡಂಗಡಿಯಲ್ಲಿ ಚಹಾ ಸೇವಿಸಿದರು. ಸಾರ್ವಜನಿಕರ ಜತೆ ಮಾತುಕತೆ ನಡೆಸಿದರು. ಹೋಗುವಾಗ ಚಹಾ ಅಂಗಡಿಯ ಸುರೇಶ್​ ಕೈಗೆ 500 ರೂ.ಕೊಟ್ಟು ಬೆನ್ನು ತಟ್ಟಿದರು.

ಅಕ್ಕಿರೊಟ್ಟಿ, ಚಿತ್ರಾನ್ನ, ಕೇಸರಿಬಾತ್​: ಮಾಯಸಂದ್ರ ದಲಿತರ ಕೇರಿಗೆ ತೆರಳಿದ ಕಂದಾಯ ಸಚಿವ ಆರ್​.ಅಶೋಕ್​ ರವಿ ಎಂಬುವರ ಮನೆಯಲ್ಲಿ ತಿಂಡಿ ತಿಂದರು. ಸಚಿವರಿಗಾಗಿ ತಯಾರಿಸಿದ್ದ ಅಕ್ಕಿರೊಟ್ಟಿ, ಚಿತ್ರಾನ್ನ, ಕೇಸರಿಬಾತ್​, ಉಪ್ಪಿಟ್ಟು ತಿಂದು ಖುಷಿಪಟ್ಟರು.

ದಲಿತ ಸಮುದಾಯದ ಹೆಣ್ಣುಮಕ್ಕಳು ಆರತಿ ಬೆಳಗಿ, ಕಳಸ ಹೊತ್ತು ಸಚಿವರನ್ನು ಬರಮಾಡಿಕೊಂಡರು. ಗ್ರಾಮದ ಅಭಿವೃದ್ಧಿಗೆ 1 ಕೋಟಿ ರೂ. ನೀಡಲಾಗಿದೆ. ದಲಿತ ಕಾಲನಿಯಲ್ಲಿ ಬಾಕ್ಸ್​ ಚರಂಡಿ ಹಾಗೂ ಕಾಂಕ್ರೀಟ್​ ರಸ್ತೆ ನಿರ್ಮಾಣಕ್ಕೂ ಆದ್ಯತೆ ನೀಡುವಂತೆ ಎಂದು ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಅವರಿಗೆ ನಿರ್ದೇಶಿಸಿದರು. 10.35ಕ್ಕೆ ಮಾಯಸಂದ್ರದಿಂದ ನಿರ್ಗಮಿಸಿದ ಸಚಿವರು ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net