ಕಂದಾಯ ನೌಕರರಿಂದ ಧರಣಿ

11111
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಗ್ರಾಮ ಆಡಳಿತಾಧಿಕಾರಿ ಗೌತಮ್ ಎಂಬುವರಿಗೆ ಪ್ರಾಣ ಬೆದರಿಕೆ ಹಾಕಿರುವ ಬೆಟ್ಟಕೋಟೆಯ ಸಂದಪ್ಪ ಎಂಬುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಂದಾಯ ಇಲಾಖೆ ನೌಕರರು ಸೋಮವಾರ ತಹಸೀಲ್ದಾರ್ ಎಚ್.ಬಾಲಕೃಷ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಕಂದಾಯ ಇಲಾಖಾ ನೌಕರರ ಸಂಘ, ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಗ್ರಾಮ ಸಹಾಯಕರ ಸಂಘ, ಮೋಜಿಣಿದಾರರ ಸಂಘಗಳ ಸಹಯೋಗದಲ್ಲಿ ತಾಲೂಕು ಆಡಳಿತ ಸೌಧದ ಮುಂಭಾಗ ನೌಕರರು ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು. ಪೊಲೀಸರಿಗೆ ಸಂದಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ ಎಂದು ಮನವಿ ಸ್ವೀಕರಿಸಿದ ತಹಸೀಲ್ದಾರ್ ತಿಳಿಸಿದರು. ಸಾರ್ವಜನಿಕರು ಅಧಿಕಾರಿಗಳೊಂದಿಗೆ ಬಾಂಧವ್ಯ ಹೊಂದಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು, ಕಾನೂನು ಚೌಕಟ್ಟಿನಲ್ಲಿ ಏನೆಲ್ಲಾ ಮಾಡಲು ಅವಕಾಶ ಇದೆಯೋ ಅದನ್ನು ಮಾಡುತ್ತಾರೆ, ಕಾನೂನು ಮೀರಿ ಮಾಡಲು ಒತ್ತಡ ಹೇರಿದಾಗ ಮಾಡಲಾಗದ ಸಂದರ್ಭದಲ್ಲಿ ಈ ರೀತಿ ನಿಂದಿಸುವುದು ಸರಿಯಲ್ಲ ಎಂದು ತಿಳಿಸಿದರು.

ಕ್ರಮ ಕೈಗೊಳ್ಳಿ: ಕಂದಾಯ ಇಲಾಖಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುದೀಪ್ ಮಾತನಾಡಿ, ಸರ್ಕಾರಿ ನೌಕರರು ಸಾರ್ವಜನಿಕರ ಕೆಲಸವನ್ನು ಸಕಾಲಕ್ಕೆ ಮಾಡುತ್ತಾರೆ. ಆದರೆ ಕೆಲವು ತಾಂತ್ರಿಕ ದೋಷಗಳಿಂದ ತಡವಾದಾಗ ನೌಕರರ ಮೇಲೆ ಹಲ್ಲೆ, ನಿಂದಿಸುವುದು ಆಗುತ್ತದೆ. ನಮ್ಮ ಹಂತದಲ್ಲಿ ಬಗೆಹರಿಯುವುದು ನಾವೇ ಮಾಡುತ್ತೇವೆ. ಸರ್ಕಾರದ ಹಂತದಲ್ಲಿ ಇರುವುದನ್ನು ನಾವು ಮಾಡಲು ಆಗುವುದಿಲ್ಲಾ ಎಂದು ತಿಳಿಸಿದರು. ಸರ್ಕಾರಿ ನೌಕರರ ಮೇಲೆ ಪ್ರಾಣ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ ಅವರ ವಿರುದ್ಧ ಕಾನೂನು ಕ್ರಮ ಜರುಗಬೇಕು ಇಲ್ಲವಾದರೆ ನಮ್ಮ ಹೋರಾಟ ತೀವ್ರಗೊಳಿಸುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net