

ಚಿತ್ರದುರ್ಗ: ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆ ಪ್ರಕ್ರಿಯೆ ಜೂ.30 ರೊಳಗೆ ಪೂರ್ಣಗೊಳಿಸಿ, ಅಂತಿಮ ಅಧಿಸೂಚನೆ ಹೊರಡಿಸುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಟ್ಟಿ, ತಾಂಡಾ, ಹಾಡಿ, ಕ್ಯಾಂಪ್ ಇತ್ಯಾದಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕು ಎಂದರು.
ಇದಕ್ಕಾಗಿ ಜಿಲ್ಲೆಯಲ್ಲಿ 316 ಗ್ರಾಮಗಳನ್ನು ಗುರುತಿಸಲಾಗಿದೆ. ಈಗಾಗಲೇ 296 ಪ್ರಾಥಮಿಕ ಹಾಗೂ 206 ಅಂತಿಮ ಅಧಿಸೂಚನೆಯಾ ಗಿವೆ. 61 ಗ್ರಾಮಗಳ ಅಂತಿಮ ಅಧಿಸೂಚನೆ ಬಾಕಿ ಇದೆ ಎಂದು ಡಿಸಿ ಟಿ. ವೆಂಕಟೇಶ್ ಮಾಹಿತಿ ನೀಡಿದರು.
ಗ್ರಾಪಂಗಳಲ್ಲಿ ವಸತಿ ಪ್ರದೇಶಗಳ ಪಟ್ಟಿ ಇದೆ. ಕಂದಾಯ ಗ್ರಾಮಗಳ ಸಂಖ್ಯೆಗಿಂತ ವಸತಿ ಪ್ರದೇಶಗಳ ಸಂಖ್ಯೆ ಹೆಚ್ಚಿದೆ. ಇಲಾಖೆ ಬಳಿ ದಾಖಲೆ ಸಹಿತ ಗ್ರಾಮಗಳ ಮಾಹಿತಿ ಇರುತ್ತದೆ. ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗ್ರಾಮಗಳನ್ನಾಗಿ ರಚಿಸಬೇಕಿದೆ. ದಾಖಲೆ ಒದಗಿಸಿ ಬಡವರಿಗೆ ಬದುಕು ಕಲ್ಪಿಸಬೇಕಿದೆ.
ಈಗಾಗಲೇ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅನಧಿಕೃತ ನಿವೇಶನ, ಕಟ್ಟಡಗಳಿಗೆ ಬಿ-ಖಾತೆ ವಿತರಿಸಲಾಗುತ್ತಿದೆ. ಅದೇ ರೀತಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಅನಧಿಕೃತ ಕಂದಾಯ ನಿವೇಶನ, ಕಟ್ಟಡಗಳಿಗೂ ಬಿ-ಖಾತಾ ವಿತರಿಸಲು ಸರ್ಕಾರ ನಿರ್ಧರಿಸಿದೆ. 10 ದಿನಗಳಲ್ಲಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.
ಕೇಂದ್ರದಿಂದ ಜನಗಣತಿ ಆರಂಭವಾದರೆ, ಹೊಸ ಕಂದಾಯ ಘಟಕಗಳ ರಚನೆಗೆ ವಿಧಿಸುವ ನಿಷೇಧ ತೆರವಿಗೆ 2 ವರ್ಷ ಬೇಕಾಗ ಬ ಹುದು. ಆದ್ದರಿಂದ ಜೂ.30 ರೊಳಗೆ ಪೂರ್ಣಗೊಳ್ಳಬೇಕೆಂದು ಸಚಿವರು ತಾಕೀತು ಮಾಡಿದರು.
ಗ್ರಾಮದ 1ಕಿ.ಮೀ. ವ್ಯಾಪ್ತಿಯೊಳಗೆ 10 ಮನೆಗಳಿಗಿಂತಲೂ ಅಧಿಕವಿದ್ದರೆ ಉಪ ಗ್ರಾಮ ರಚನೆಗೆ ಅವಕಾಶ ಇದೆ. ಬಿಟ್ಟು ಹೋಗಿರುವ ಕಂದಾಯ ಗ್ರಾಮಗಳ ರಚನೆ ಹಾಗೂ ಗುರುತಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಯಾದವ ಹಾಗೂ ತಾಂಡಾ ಸಂಘದವರಿಂದ ಮಾಹಿತಿ ಹಾಗೂ ಗ್ರಾಪಂಗಳಿಂದ ಜನವಸತಿ ಪಟ್ಟಿ ಪಡೆಯುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ಹಕ್ಕುಪತ್ರ ಹಾಗೂ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ 6393 ಕುಟುಂಬಗಳ ದಾಖಲೆಗಳಿಗೆ ಅ ನುಮೋದನೆ ಸಿಕ್ಕಿದೆ. 4305 ಡೀಡ್‌ಗಳಿಗೆ ತಹಸೀಲ್ದಾರ್‌ಗಳ ಸಹಿ ಆಗಿದೆ. 2888 ಫಲಾನುಭವಿಗಳಿಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿದೆ. 2403 ಫಲಾನುಭವಿಗಳ ಇ-ಸ್ವತ್ತು ನೋಟಿಸ್ ಜನರೇಟ್ ಆಗಿದೆ. ಎಲ್ಲ ಫಲಾನುಭವಿಗಳ ಹಕ್ಕುಪತ್ರ ನೋಂದಣಿ ಹಾಗೂ ಇ-ಸ್ವತ್ತು ಸಿದ್ಧಪಡಿಸುವ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಡಿಸಿ ಹೇಳಿದರು.
ಭೂ ಸುರಕ್ಷಾ ಯೋಜನೆಯಡಿ ರಾಜ್ಯದಲ್ಲಿ ಅಂದಾಜು 100 ಕೋಟಿ ಪುಟಗಳ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಸದ್ಯಕ್ಕೆ 20 ಕೋಟಿ ದಾಖಲೆಗಳ ಡಿಜಿಟಲೀಕರಣಗೊಳಿಸಲಾಗಿದೆ. ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ ತಾಲೂಕುಗಳು ಉತ್ತಮ ಸಾಧನೆ ತೋರಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್,ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಎಡಿಸಿ ಬಿ.ಟಿ. ಕುಮಾರಸ್ವಾಮಿ ಮತ್ತಿತರರು ಇದ್ದರು.
--- ಬಾಕ್ಸ್--
ಹೊಸಪೇಟೆಯಲ್ಲಿ ಸಾಧನಾ ಸಮಾವೇಶ
ಮೇ 20ರಂದು ಹೊಸಪೇಟೆಯಲ್ಲಿ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. 1ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ, ವಿವಿಧ ಸವಲತ್ತುಗಳನ್ನು ವಿತರಿಸಲಾಗುವುದು. ಇದು 2 ವರ್ಷಗಳ ಸಂಭ್ರಮಾಚರಣೆ ಅಲ್ಲ. ಈ ಸಮಾರಂಭದಲ್ಲಿ ಸಿಎಂ, ಡಿಸಿಎಂ ಹಾಗೂ ಎಲ್ಲ ಸಚಿವರು ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಪೋಡಿ ದುರಸ್ತಿ ‘ನನ್ನಭೂಮಿ’ಅಂದೋಲನ ಹಮ್ಮಿಕೊಳ್ಳಲಾಗಿದೆ ಎಂದೂ ತಿಳಿಸಿದರು.