ಕಂದಾಯ ಇಲಾಖೆಯ 30 ಸಾವಿರ ಪ್ರಕರಣಗಳು ಇತ್ಯರ್ಥ:ಸಚಿವ ಕೃಷ್ಣ ಬೈರೇಗೌಡ

ಕಂದಾಯ ಇಲಾಖೆಯ 30 ಸಾವಿರ ಪ್ರಕರಣಗಳು ಇತ್ಯರ್ಥ:ಸಚಿವ ಕೃಷ್ಣ ಬೈರೇಗೌಡ
Published on

ಹಾಸನ: ರಾಜ್ಯದಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಒಟ್ಟು 60 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 30 ಸಾವಿರ ಪ್ರಕರಣಗಳನ್ನ ಜನವರಿ ಒಳಗೆ ಮುಕ್ತಾಯಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶುಕ್ರವಾರ ನಗರಕ್ಕೆ ಆಗಮಿಸಿದ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಇಲಾಖೆಯ ವ್ಯಾಪ್ತಿಯ ಡಿಸಿ, ಎಸಿ ಹಾಗೂ ತಹಸೀಲ್ದಾರ್ ಕೋರ್ಟ್‌ನಲ್ಲಿ 60 ಸಾವಿರ ಪ್ರಕರಣಗಳು ಹಲವು ವರ್ಷಗಳಿಂದ ಬಾಕಿ ಉಳಿದಿದ್ದವು. ಇವುಗಳನ್ನ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 30,000 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದ ಪ್ರಕರಣಗಳನ್ನು ಜನವರಿ ಒಳಗೆ ವಿಲೇವಾರಿ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.
ರಾಜ್ಯದ ಎಲ್ಲಾ ತಹಸೀಲ್ದಾರ್ ಅವರು 90 ದಿನದ ಒಳಗೆ ಬಂದಿರುವಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಆದರೆ ಐದು ವರ್ಷಗಳವರೆಗೆ ಹಲವು ಪ್ರಕರಣಗಳು ಇತ್ಯರ್ಥವಾಗಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಅವುಗಳ ಬಗ್ಗೆ ಹೆಚ್ಚು ಗಮನಹರಿಸಿ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಗಮನಹರಿಸಿದ್ದೇವೆ ಎಂದು ಹೇಳಿದರು.
ರೈತರು ಮತ್ತು ಜನಸಾಮಾನ್ಯರು ತಮ್ಮ ಕೆಲಸ ಮಾಡಿಸಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಅವರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಕಾಲಮಿತಿಯೊಳಗೆ ಕೆಲಸವನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದೇನೆ. ಒಂದು ವೇಳೆ ತಪ್ಪು ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರ್ವೆ, ಪೋಡಿ ಕೆಲಸ ಹಾಗೂ ಉಳಿದಂತಹ ಕೆಲಸಗಳನ್ನು ಅಗತ್ಯವಾಗಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸವಿಟ್ಟು ಈ ಖಾತೆಯನ್ನು ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತಿದ್ದು, ಅಧಿಕಾರಿಗಳ ಮಟ್ಟದಲ್ಲಿ ಆಗಬೇಕಾಗಿರುವ ಕೆಲಸವನ್ನು ತಕ್ಷಣವೇ ಮಾಡಿಸುವ ಜವಾಬ್ದಾರಿ ನನ್ನದಾಗಿದೆ. ಈಗಾಗಲೇ ರಾಜ್ಯದ 20 ಜಿಲ್ಲೆಗಳಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಹೇಳಿದರು.
ಎಚ್‌ಆರ್‌ಪಿ ಹಗರಣ ಶೀಘ್ರದಲ್ಲಿ ಇತ್ಯರ್ಥ:
ಎಚ್‌ಆರ್‌ಪಿ ಪುನರ್ವಸತಿ ಯೋಜನೆಯಲ್ಲಿ ಸಾಕಷ್ಟು ಬೋಗಸ್ ಮಂಜೂರಾತಿಗಳಾಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ನಾನು ಈ ಹಿಂದೆಯೂ ಕೂಡ ಲೆಕ್ಕ ಪರಿಶೋಧನಾ ಸಮಿತಿಯಲ್ಲಿ ಇದ್ದಾಗ ಅದರ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಡೂರು ಸೇರಿದಂತೆ ಮೂಡಿಗೆರೆಯಲ್ಲಿ ಆರು ಸಾವಿರ ಎಕರೆ ಜಮೀನನ್ನು ಬೋಗಸ್ ಮಂಜೂರಾತಿ ಮಾಡಿಕೊಟ್ಟಿದ್ದರು. ಅದನ್ನು ರದ್ದು ಮಾಡುವುದರ ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಅದೇ ರೀತಿ ಜಿಲ್ಲೆಯಲ್ಲೂ ಕೂಡ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಜನರ ಸಮಸ್ಯೆಗೆ ಹೋರಾಟ ಮಾಡಲಿ:
ಯತೀಂದ್ರ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿಯ ಮಗನಾಗಿ ಆ ಕ್ಷೇತ್ರದ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ. ಅದನ್ನು ಬಿಟ್ಟು ಇವರು ವಿನಾಃಕಾರಣ ಜನರ ದಾರಿ ತಪ್ಪಿಸುವುದು ಮತ್ತು ಸಮಯ ವ್ಯರ್ಥ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಲಿ, ಅದನ್ನು ಗೌರವಿಸುತ್ತೇವೆ ಮತ್ತು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net