

ನಾಗಮಂಗಲ: ಹತ್ತಾರು ವರ್ಷಗಳಿಂದ ಧೂಳು ಹಿಡಿದಿರುವ ಕಡತಗಳು ಹಾಗೂ ಎತ್ತರವಾದ ಕಡತಗಳ ರಾಶಿಯಿದ್ದರೆ ಮಾತ್ರ ಅದು ಕಂದಾಯ ಇಲಾಖೆ ಎಂಬ ಸಂಕೇತವಾಗಿತ್ತು. ಈ ರೀತಿಯ ಸಂಕೇತವನ್ನು ತೊಡೆದು ಹಾಕಲು ಇ- ಆಫೀಸ್ ಮತ್ತು ಡಿಜಿಟಲೀಕರಣಗೊಳಿಸುವ ಮೂಲಕ ಹೊಸ ಸ್ಪರ್ಶ ನೀಡಿ ಜನಪರವಾದ ಆಡಳಿತ ನಡೆಸಲು ಮುಂದಾಗಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಪಟ್ಟಣದ ಟಿ.ಬಿ. ಬಡಾವಣೆಯ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ದರಖಾಸ್ತು ಪೋಡಿ, ದುರಸ್ತಿ ಸರಳೀಕೃತ, ಹೊಸ ಪಹಣಿ ಮತ್ತು ಪೋಡಿ ದಾಖಲೆ ವಿತರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಇನ್ನು ಮುಂದೆ ಎಲ್ಲ ಕಡತಗಳ ಡಿಜಿಟಲೀಕರಣ ಮಾಡಲಾಗುವುದು. ರೈತರ ಕೋರಿಕೆ ಮೇಲೆ ಕೆಲಸ ಮಾಡೊದು ಅಲ್ಲ, ನಮ್ಮ ಕರ್ತವ್ಯ ಅದು ಎಂದು ಭಾವಿಸಿ ನಾವು ಕೆಲಸ ಮಾಡುತ್ತಿದ್ದೇವೆ. 50 ವರ್ಷಗಳ ಹಿಂದೆ ಸಾಗುವಳಿ ಮಾಡಿ ಸರ್ಕಾರದ ಹಲವು ಯೋಜನೆಗಳಡಿಯಲ್ಲಿ ಮಂಜೂರಾತಿ ಪಡೆದಿದ್ದಾರೆ. 50 ವರ್ಷಗಳ ಹಿಂದೆ ಮಂಜೂರಾಗಿದ್ದರೂ ಇದುವರೆಗೂ ದುರಸ್ತಿಯಾಗಿಲ್ಲ. ಬರೀ ಸಾಗುವಳಿ ಪತ್ರ ಕೊಟ್ಟರೆ ನಿಮ್ಮ ಜುಟ್ಟು ನಮ್ಮ ಕೈಯಲ್ಲಿರುತ್ತದೆ. ಆ ರೀತಿ ಮಾಡೊದು ಬೇಡ ಅಂತ ದುರಸ್ತ್, ಪೋಡಿ ಹಾಗೂ ಆರ್‌ಟಿಸಿ ಮಾಡಿ ಕೊಡಲಾಗುತ್ತಿದೆ ಎಂದರು.
1978ರಲ್ಲಿ ಮಂಜೂರಾಗಿರುವವರಿಗೆ ಇಂದು ದುರಸ್ತ್, ಪೋಡಿ ಮಾಡಿಕೊಡುತ್ತಿದ್ದೇವೆ. ನಮ್ಮಂಥ ಕೆಲವರು ಶಾಸಕರು ಬ್ರಹ್ಮನಿಗಿಂತ ದೊಡ್ಡವರಿದ್ದಾರೆ. 50 ಎಕರೆ ಜಮೀನು ಇದ್ದರೆ 70 ಎಕರೆ ಜಮೀನಿಗೆ ಸಾಗುವಳಿ ನೀಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 3281 ಸರ್ಕಾರಿ ಸರ್ವೆ ನಂಬರ್‌ಗಳಲ್ಲಿ ಜಮೀನು ಮಂಜೂರಾಗಿವೆ. ಒಂದು ಸರ್ವೆ ನಂಬರಿನಲ್ಲಿ ಸರಾಸರಿ 8-10 ಜನರಿಗೆ ಮಂಜೂರಾಗಿದೆ. 30 ಸಾವಿರ ರೈತ ಕುಟುಂಬಗಳಿಗೆ ಮಂಜೂರಾಗಿರುವ ಜಮೀನು ಇನ್ನು ದುರಸ್ತ್ ಆಗಿಲ್ಲ. ಈಗ ಎಲ್ಲ ಜಮೀನುಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಈಗ ಯಾರದ್ದೊ ಜಮೀನು ಮತ್ಯಾರೋ ನಕಲಿಯಾಗಿ ಮಾರಾಟ ಮಾಡಲಾಗುವುದಿಲ್ಲ. ಆಧಾರ್ ಜೋಡಣೆಯಿಂದ ನಕಲಿಯಾಗಿ ಜಮೀನು ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ತಹಸೀಲ್ದಾರ್ ಕೋರ್ಟ್‌ಗೆ 3 ತಿಂಗಳಷ್ಟೆ ವಾಯಿದೆ ಇರೋದು. ಆದರೆ ವರ್ಷಾನುಗಟ್ಟಲೆ ಇಟ್ಟುಕೊಂಡಿದ್ದರು. ಆ ರೀತಿಯ ಎಲ್ಲ ಕೇಸ್‌ಗಳನ್ನು ಬಗೆಹರಿಸಲಾಗಿದೆ. ಜನರಿಗೆ ಕೆಲಸ ಮಾಡಿಕೊಟ್ಟರೆ ನಿಜವಾಗಿಯೂ ನಮ್ಮನ್ನ ಸ್ಮರಿಸುತ್ತಾರೆ, ಸರ್ಕಾರವನ್ನು ಸ್ಮರಿಸುತ್ತಾರೆ ಎಂದರು.
ಶಿಫಾರಸ್ಸಿಗಿಂತ ಕೆಲವು ಶಕ್ತಿಯಿಂದ ಕೆಲಸವಾಗುತ್ತವೆ: ಕಂದಾಯ ಸಚಿವನಾದ ನಾನು ಅಥವಾ ಸಚಿವ ಚಲುವರಾಯಸ್ವಾಮಿ ಕರೆ ಮಾಡಿದರೂ ಕೆಲವು ಕೆಲಸಗಳು ಆಗಲ್ಲ. ಆದರೆ ಅಂತಹ ಪ್ರಕರಣಗಳಲ್ಲಿ ಕೆಲವು ಶಕ್ತಿಗಳು ಕೆಲಸ ಮಾಡುತ್ತವೆ. ಕೇವಲ ನಮ್ಮಂತವರ ಶಿಫಾರಸು ಮಾತ್ರವಲ್ಲದೆ ಎಲ್ಲ ರೀತಿಯ ಶಕ್ತಿಗಳು ಬೇಕಾಗುತ್ತದೆ ಎಂದರು.
ದುರಸ್ತ್ ಮಾಡಿಕೊಡಬೇಕಾದದ್ದು ನಮ್ಮ ಕರ್ತವ್ಯ. ಜವಾಬ್ದಾರಿ ಕೆಲಸದಲ್ಲಿರುವಂತಹ ನಮ್ಮಂತವರು ಸರಿಯಾಗಿದ್ದರೆ ಅಧಿಕಾರಿಗಳು ಏಕೆ ತಪ್ಪು ಮಾಡುತ್ತಾರೆ? ನಾವು ನಮ್ಮ ವೈಯಕ್ತಿಕ ಕೆಲಸಕ್ಕೆ ಸೀಮಿತವಾದರೆ ಅಧಿಕಾರಿಗಳು ಅವರದ್ದೇ ದಾರಿಯಲ್ಲಿ ಹೋಗುತ್ತಾರೆ. ವಿಧಾನಸೌಧದ ಮೇಲೆ ಸರ್ಕಾರಿ ಕೆಲಸ ದೇವರ ಕೆಲಸ ಅಂತ ಬೋರ್ಡ್ ಹಾಕಿಕೊಂಡರೆ ಸಾಲದು, ಅದರಂತೆ ನಮ್ಮ ಆತ್ಮ ತೃಪ್ತಿಗಾದರೂ ಕೆಲಸ ಮಾಡಬೇಕಿದೆ. ಹಲವು ಸಮಸ್ಯೆಗಳು ಕಾಲದಿಂದ ಕಾಲಕ್ಕೆ ಬಗೆಹರಿದಿಲ್ಲ, ಅಂಥವುಗಳನ್ನು ಪತ್ತೆಹಚ್ಚಿ ಬಗೆಹರಿಸಲಾಗುತ್ತಿದೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು.
ಬೇಡಪ್ಪ ಅಂದ್ರು, ಸನ್ಯಾಸಿ ಆಗ್ಬಿಟ್ರು!: ಮಂಡ್ಯ ಜಿಲ್ಲೆಯಲ್ಲಿ ಒಳ್ಳೆಯ ಅಪರ ಜಿಲ್ಲಾಧಿಕಾರಿ ಇದ್ದರು. ಡಾ.ಎಚ್.ಎಲ್.ನಾಗರಾಜು ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಸನ್ಯಾಸತ್ವ ಸ್ವೀಕರಿಸೋದು ಬೇಡಪ್ಪ ಅಂತ ಹೇಳಿದರೂ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಅವರು ಇದುವರೆಗೂ ರಾಜ್ಯದಲ್ಲಿ ಎಲ್ಲ ಕಡೆಗಳಲ್ಲಿಯೂ ಉತ್ತಮ ಕೆಲಸ ಮಾಡಿರುವುದಕ್ಕೆ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಎಷ್ಟೇ ಮಾಡಿದರೂ ಜನರು ತೃಪ್ತಿಪಡಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಹಲವು ಹೊಗಳಿಕೆ, ತೆಗಳಿಕೆಯ ನಡುವೆಯೂ ಹಲವು ದಿಟ್ಟ ನಿರ್ಧಾರಗಳನ್ನು ಕಂದಾಯ ಸಚಿವರು ತೆಗೆದುಕೊಳ್ಳುವ ಮೂಲಕ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಜನರಿಗೆ ಸಮಸ್ಯೆಗಳಿಲ್ಲದಂತೆ, ಮಧ್ಯವರ್ತಿಗಳಿಲ್ಲದಂತೆ ಮಾಡಲು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಾವು ಎಷ್ಟೇ ಪ್ರಾಮಾಣಿಕವಾಗಿ ಮಾಡಿದರೂ ಜನರು ತೃಪ್ತಿಪಡಲ್ಲ, ನಮಗೆ ಮಾರ್ಕ್ಸ್ ಕೊಡಲ್ಲ ಎಂದು ಬೇಸರಿಸಿದರು.
1960-70 ರಲ್ಲಿ ಮಂಜೂರಾದ ಜಮೀನುಗಳಿಗೆ ಆರ್‌ಟಿಸಿ, ಪೋಡಿ ಆಗಿಲ್ಲ. ಅವುಗಳನ್ನು ಸರಳೀಕೃತಗೊಳಿಸಿ ಎಲ್ಲವನ್ನು ಒಂದು ವಾರದಲ್ಲಿ 414 ಸರ್ವೆ ನಡೆಸಲಾಗಿದೆ. ನೀವು ಸರ್ಟಿಫಿಕೇಟ್ ಕೊಡ್ತಿರಾ, ಬಿಡ್ತಿರಾ ಅನ್ನೊ ಪ್ರಶ್ನೆಯಲ್ಲ. 138 ಜನರನ್ನು ಶಾಸಕರನ್ನಾಗಿಸಿದ್ದೀರಿ, ನಮ್ಮ ಜವಾಬ್ದಾರಿಯನ್ನು ನಾವು ಮಾಡ್ತಿವಿ. ಇಲ್ಲಿ ಸೌಲಭ್ಯ ಪಡೆದು ಅಲ್ಲಿ ಹೋಗಿ ಬೈದ್ರು ಪರವಾಗಿಲ್ಲ. ನಾವು ನಮ್ಮ ಕೆಲಸ ಮಾಡುತ್ತೇವೆ ಎಂದರು.
ನಿಮ್ಮೆಲ್ಲರ ಆಶಿರ್ವಾದವಿದ್ದರೆ ಮುಂದುವರೆಯುತ್ತೇವೆ, ಇಲ್ಲ ಅಂದ್ರೆ ನಿಮ್ಮೆಲ್ಲರ ತೀರ್ಮಾನ ಏನು ಅದು ಮುಂದೆ ನೋಡೋಣ. ಆದರೆ ನಮ್ಮ ಸರ್ಕಾರ 5 ವರ್ಷ ಪೂರೈಸುತ್ತದೆ. ನೀವುಗಳು ತುಂಬಾ ಒತ್ತಡ ತರುತ್ತೀದ್ದೀರಿ, ನನಗೆ ಮಂಡ್ಯ ಜಿಲ್ಲೆ ಅದರಲ್ಲೂ ನಾಗಮಂಗಲ ವಿಶೇಷವಾಗಿದೆ. ಆದರೆ ಸಚಿವನಾಗಿ ನಾನು ರಾಜ್ಯದಲ್ಲಿ ಎಲ್ಲ ಕಡೆ ನೋಡಬೇಕಿದೆ. ಜನರು ಮೂರು ತಲೆಮಾರು ಕಳೆದರೂ ಖಾತೆಗೆ ಅರ್ಜಿ ಸಲ್ಲಿಸಿಲ್ಲ. ನಿಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಿ. ನಮ್ಮ ಸರ್ಕಾರ ಜನರ ಮನೆಬಾಗಿಲಿಗೆ ಬಂದು ಕೆಲಸ ಮಾಡಲು ತಯಾರಿದ್ದು ಅದರಂತೆ ಎಲ್ಲ ಯೋಜನೆಗಳನ್ನು ನಿಮಗೆ ಒದಗಿಸುತ್ತಿದ್ದೇವೆ ಎಂದು ಜನರಿಗೆ ಹೇಳಿದರು.
ವೇದಿಕೆಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು. ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ, ಭೂಮಾಪನ ಇಲಾಖೆ ಆಯುಕ್ತ ಮಂಜುನಾಥ್, ಜಂಟಿ ನಿರ್ದೇಶಕ ಪ್ರಕಾಶ್, ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷ, ಜಿಲ್ಲಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ಶ್ರೀನಿವಾಸ್ ಇದ್ದರು.