ಕಂದಾಯ ಇಲಾಖೆ ಕಾರ್ಯವೈಖರಿಗೆ ಆಕ್ರೋಶ

20spt1
Published on

ಸೋಮವಾರಪೇಟೆ: ತಾಲೂಕಿನ ಕೂತಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ರೈತರು ಕಂದಾಯ ಇಲಾಖೆ ಕಾರ್ಯವೈಖರಿ ವಿರುದ್ಧ ಅಕ್ರೋಶ ಹೊರ ಹಾಕಿದರು.


ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಕೆಲ ವಿಲೇಜ್ ಮ್ಯಾಪ್‌ಗಳಿಲ್ಲ. ಕೆಲ ಕಡತಗಳು ಮಾಯವಾಗಿದೆ. ಸಂಬಂಧಪಟ್ಟ ವಿಭಾಗದ ಸಿಬ್ಬಂದಿ ನಿರ್ಲಕ್ಷ್ಯದ ಉತ್ತರ ನೀಡಿ ಸತಾಯಿಸುತ್ತಾರೆ ಎಂದು ಕೆ.ಸಿ.ಉದಯಕುಮಾರ್ ದೂರಿದರು.


ಶಾಂತಳ್ಳಿ ಹೋಬಳಿಯಲ್ಲಿರುವ ಕಂದಾಯ ಇಲಾಖೆ ಸಿಬ್ಬಂದಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ನಿಗದಿತ ಸಮಯದಲ್ಲಿ ಯಾವುದೇ ಕೆಲಸ ಮಾಡಿಕೊಡುತ್ತಿಲ್ಲ. ವೃದ್ಧಾಪ್ಯ ವೇತನ ಮಾಡಿಕೊಡಲು ಸತಾಯಿಸುತ್ತಿದ್ದಾರೆ. ಸಣ್ಣ ತಾಂತ್ರಿಕ ದೋಷಗಳನ್ನು ಇಟ್ಟುಕೊಂಡು ರೈತರನ್ನು ಸತಾಯಿಸುತ್ತಿದ್ದಾರೆ ಎಂದು ಕೃಷಿಕ ಜೀತೇಂದ್ರ ದೂರಿದರು.
ಈ ಹಿಂದೆ ಅಕ್ರಮ ಸಕ್ರಮದಲ್ಲಿ ಫಾರಂ 50 ಮತ್ತು 53ರಲ್ಲಿ ರೈತರು ಅರ್ಜಿ ಸಲ್ಲಿಸಿದ್ದರು. ಅವರ ಸ್ವೀಕೃತಿ ಪತ್ರ ಇದೆ. ಆದರೆ ತಾಲೂಕು ಕಚೇರಿಯಲ್ಲಿ ಕಡತಗಳೇ ನಾಪತ್ತೆಯಾಗಿವೆ. ಇದಕ್ಕೆ ನೇರ ಹೊಣೆ ಕಂದಾಯ ಇಲಾಖೆ ಎಂದು ದಿವಾಕರ್ ದೂರಿದರು.


ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೇ ನಂ.ಗಳ ದುರಸ್ತಿ ಕೆಲಸವಾಗುತ್ತಿಲ್ಲ. ಬಹುತೇಕ ರೈತರಿಗೆ ಆಸ್ತಿ ದಾಖಲಾತಿಗಳಿಲ್ಲ. ರೈತರಿಗೆ 5 ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಆದರೆ ಸಾಲ ಪಡೆಯಲು ಆಸ್ತಿ ದಾಖಲಾತಿ ಕೊರತೆಯಿದೆ. ಕಂದಾಯ ಇಲಾಖೆ ಜವಾಬ್ದಾರಿಯಿಂದ ಕೆಲಸ ಮಾಡದಿದ್ದರೆ, ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಕಾಫಿ ಬೆಳೆಗಾರ ಕೆ.ಟಿ.ಪರಮೇಶ್ ಹೇಳಿದರು.


ಗ್ರಾಮಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ವಾರದಲ್ಲಿ ಎರಡು ದಿನ ತೋಳೂರು ಶೆಟ್ಟಳ್ಳಿಯಲ್ಲಿ ಕೆಲಸ ನಿರ್ವಹಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೂತಿ ಗ್ರಾಮದಲ್ಲಿ 1188 ಎಕರೆ ಜಾಗವಿದ್ದು, ಸಾವಿರ ಎಕರೆ ಸಿ ಮತ್ತು ಡಿ ಭೂಮಿಯಾಗಿದೆ. ಈ ಭೂಮಿಗೆ ಹಕ್ಕುಪತ್ರಗಳು ಸಿಗುತ್ತಿಲ್ಲ. ಜಾಗಕ್ಕೆ ಹಕ್ಕುಪತ್ರ ಕೊಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಬಿ.ಆರ್. ವಿನೋದ್ ಒತ್ತಾಯಿಸಿದರು.


ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಉಪವಿಭಾಗಧಿಕಾರಿ ಯತೀಶ್ ಬಲ್ಲಾಳ್ ಭರವಸೆ ನೀಡಿದರು.


ಕೂತಿ ಮಾರ್ಗದಲ್ಲಿ ಹಾದುಹೋಗುವ ಎಸ್‌ಎಚ್-85 ಹೆದ್ದಾರಿ ವಿಸ್ತರಣೆಗೆ ಕೂಡಲೇ ಅನುದಾನ ಬಿಡುಗಡೆಗೊಳಿಸಬೇಕು ಎಂದು ಕೆ.ಎಂ.ದಿನೇಶ್ ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್, ಪಿ.ಡಿ.ಒ.ಮಂಜುಳಾ, ಕಂದಾಯ ನಿರೀಕ್ಷಕ ದಾಮೋದರ್, ಗ್ರಾಮಲೆಕ್ಕಿಗ ಕರಿಬಸವಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net