ಕಂದಾಯ ಅಧಿಕಾರಿಗಳು ವರ್ತನೆ ಸರಿಪಡಿಸಿಕೊಳ್ಳಲಿ

22sgr4
ಸಾಗರದಲ್ಲಿ ಮುಂಗಾರು ಮಳೆ ಪೂರ್ವಸಿದ್ಧತೆ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಚಂದ್ರಶೇಖರ್ ನಾಯ್ಕ, ಶಿವಪ್ರಸಾದ್, ಜಗನ್ನಾಥ್, ಶಾಂತಮೂರ್ತಿ ಇತರರಿದ್ದರು.
Published on

ಸಾಗರ: ಶಾಲಾ ಕಾಲೇಜುಗಳು ಆರಂಭವಾಗಲಿದ್ದು, ಮಕ್ಕಳಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳ ತುರ್ತು ಅವಶ್ಯಕತೆ ಇರುತ್ತದೆ. ಆದ್ದರಿಂದ ಪಾಲಕರನ್ನು ಸತಾಯಿಸಬೇಡಿ. ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಾಗರದ ಪ್ರವಾಸಿ ಮಂದಿರದಲ್ಲಿ ಮುಂಗಾರು ಮಳೆ ಸಿದ್ಧತಾ ಕ್ರಮಗಳ ಕುರಿತು ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್ ವಿತರಣೆ ಹಾಗೂ ಅಂಗವಿಕಲರಿಗೆ ಮೂರು ಚಕ್ರದ ಸ್ಕೂಟರ್ ವಿತರಿಸಿ ಮಾತನಾಡಿದರು. ಜನರು ನಿರೀಕ್ಷೆಯಿಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ವ್ಯವಸ್ಥಿತವಾಗಿ ಎಲ್ಲವನ್ನೂ ನಿರ್ವಹಿಸಬೇಕಾದುದು ನನ್ನ ಜವಾಬ್ದಾರಿ. ತಾಲೂಕು ಕಚೇರಿಯ ವ್ಯವಸ್ಥೆ ಸರಿಯಾಗಿಲ್ಲ ಎನ್ನುವ ಬಗ್ಗೆ ಸಾರ್ವಜನಿಕರಿಂದ ಪದೇಪದೆ ದೂರುಗಳು ಕೇಳಿಬರುತ್ತಿವೆ. ಸರ್ಕಾರಿ ಸೇವೆಯಲ್ಲಿ ವ್ಯವಸ್ಥಿತವಾಗಿ ತೊಡಗಿಸಿಕೊಳ್ಳಿ ಎಂದು ತಿಳಿಸಿದರು. ಸಾಗರ ತಾಲೂಕಿನಲ್ಲಿ ನೆಲ ನುಂಗುವ ತಂಡವೇ ಇದೆ. ಅದನ್ನು ಮಟ್ಟಹಾಕಲು ತಾಲೂಕು ಆಡಳಿತ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೆಲವರು ತಮ್ಮ ಬಳಿ ಆರು ಎಕರೆ ಜಮೀನಿದ್ದರೂ ಬಗರ್‌ಹುಕುಂನಲ್ಲಿ ಭೂ ಮಂಜೂರು ಮಾಡಿಸಿಕೊಂಡ ಪ್ರಕರಣಗಳಿವೆ. ಅವುಗಳನ್ನು ನಿರ್ದಾಕ್ಷಿಣ್ಯವಾಗಿ ರದ್ದುಗೊಳಿಸಿ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು. 94ಸಿ ಮತ್ತು 94ಸಿಸಿಗೆ ಸಂಬಂಧಿಸಿ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿವೆ. ಅವುಗಳನ್ನು ಕೂಡಲೇ ವಿಲೇವಾರಿ ಮಾಡಿ. ಭೂಮಿ ಕುರಿತ ಪ್ರಕರಣಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಬೇಕಾದ ಸ್ಥಳಗಳಲ್ಲಿ ಕೂಡಲೇ ಕ್ರಮ ಕೈಗೊಳ್ಳಿ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಾಕಷ್ಟು ಹಾನಿಯಾಗಿದೆ. ತುರ್ತು ಪರಿಹಾರ ನೀಡಲು ಕಂದಾಯ ಇಲಾಖೆ ತಕ್ಷಣ ವರದಿ ನೀಡಿ, ಕ್ರಮಕ್ಕೆ ಮುಂದಾಗಬೇಕು. ಮಳೆ ಹಾನಿಯಿಂದ ಜಮೀನು, ಜಾನುವಾರು, ಮನೆ ಏನೇ ಹಾನಿಯಾದರೂ ತಕ್ಷಣ ಕ್ರಮ ಕೈಗೊಳ್ಳಿ. ಆಡಳಿತ ವ್ಯವಸ್ಥೆಯನ್ನು ಮೊದಲು ಸರಿಪಡಿಸಿ ಎಂದು ಸಾಗರ ತಹಸೀಲ್ದಾರರಿಗೆ ಸೂಚಿಸಿದರು. ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ಇಒ ಶಿವಪ್ರಸಾದ್, ಸರ್ವೇ ಅಧಿಕಾರಿ ಜಗನ್ನಾಥ್, ಕಂದಾಯ ಇಲಾಖೆ ಶಿರಸ್ತೇದಾರ್ ಶಾಂತಮೂರ್ತಿ ಇತರರಿದ್ದರು.

ಸರ್ಕಾರಿ ಉಪಯೋಗಕ್ಕೆ ಭೂಮಿಯೇ ಇಲ್ಲದಂತಾಗುತ್ತಿದೆ. ಹೊಸನಗರ ತಾಲೂಕಿನಲ್ಲಿ ಮುರಾರ್ಜಿ ಶಾಲೆ ನಮಗೆ ಮಂಜೂರಾಗಿದೆ. ಆದರೆ ಅದನ್ನು ನಿರ್ಮಿಸಲು ಸರ್ಕಾರಿ ಭೂಮಿ ಸಿಗುತ್ತಿಲ್ಲ. ಮಂಜೂರಾದ 25 ಕೋಟಿ ರೂ. ಅನುದಾನ ವಾಪಸ್ ಹೋಗುವ ಸ್ಥಿತಿಯಿದೆ. ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ತಾಲೂಕಿಗೆ ಕೆಟ್ಟ ಹೆಸರು ತರುವ ವ್ಯವಸ್ಥೆಯನ್ನು ನಾನು ಸಹಿಸುವುದಿಲ್ಲ. ಗೋಪಾಲಕೃಷ್ಣ ಬೇಳೂರು, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net