ಕಂದಹಳ್ಳಿ ಗ್ರಾಮದಲ್ಲಿ ಹಸು, ಎತ್ತುಗಳು ಮೃತ

30 yelandur 01
ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಹಸು ಮೃತಪಟ್ಟಿರುವುದು.
Published on

ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ 2 ಹಸು ಹಾಗೂ 2 ಎತ್ತುಗಳು ಮೃತಪಟ್ಟಿದ್ದು, ಇದಕ್ಕೆ ವಿಷಮಿಶ್ರಿತ ಪಶು ಆಹಾರ ಸೇವನೆಯೇ ಕಾರಣ ಎಂದು ಶಂಕಿಸಲಾಗಿದೆ.

ಗ್ರಾಮದ ಬಸವಣ್ಣ ಎಂಬುವರಿಗೆ ಸೇರಿದ ಜಾನುವಾರುಗಳು ಇದಾಗಿದೆ. ಪಟ್ಟಣದ ಬಳೇಪೇಟೆಯಲ್ಲಿರುವ ಪಶು ಆಹಾರದ ಆಂಗಡಿಯೊಂದರಲ್ಲಿ ಪಶುಗಳಿಗೆ ಆಹಾರ ಖರೀದಿ ಮಾಡಿದ್ದರು. ಭಾನುವಾರ ಮುಂಜಾನೆ 2 ಎತ್ತು, ಒಂದು ತೆನೆ ಹಸು ಹಾಗೂ ಒಂದು ಹಾಲು ಕರೆಯುತ್ತಿದ್ದ ಹಸುವಿಗೆ ಆಹಾರ ನೀಡಿದ್ದಾರೆ. ಬಳಿಕ ಎತ್ತುಗಳಿಗೆ ಗಾಡಿ ಕಟ್ಟಿಕೊಂಡು ಕಬ್ಬು ಸಾಗಿಸಲು ತಯಾರಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಸುಗಳು ವಿಚಿತ್ರವಾಗಿ ವರ್ತಿಸಿ ಕುಸಿದು ಬಿದ್ದಿವೆ. ಇದೇ ವೇಳೆ ಕೊಟ್ಟಿಗೆಯಲ್ಲಿದ್ದ ಹಸುಗಳೂ ಸಹ ಇದೇ ರೀತಿಯಾಗಿ ವರ್ತಿಸಿ ಮಲಗಿವೆ. ಇದರಿಂದ ಗಾಬರಿಗೊಂಡ ಬಸವಣ್ಣ, ಪಟ್ಟಣದ ಪಶು ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ವೈದ್ಯರ ತಂಡ, ಹಸು ಹಾಗೂ 2 ಎತ್ತುಗಳು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

ಈ ಸಂಬಂಧ ಯಳಂದೂರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಾಹಿತಿ ಪಡೆದ ಬಳಿಕ ಅಂಗಡಿ ಮುಚ್ಚಿಸಿದ್ದಾರೆ. ಸ್ಥಳಕ್ಕೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುಂಗಧರಾಜನ್ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಲಾಯಕ್ಕೆ ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net