

ಚಿಕ್ಕಬಳ್ಳಾಪುರ: ಎಚ್.ಎನ್.ವ್ಯಾಲಿ ನೀರಿನಿಂದ ಮೈದುಂಬಿರುವ ಇಲ್ಲಿನ ಕಂದವಾರ ಕೆರೆಗೆ ತ್ಯಾಜ್ಯ ಎಸೆಯುವವರಿಗೆ ನಗರಸಭೆ ದಂಡ ವಿಧಿಸುವ ಮೂಲಕ ಎಲ್ಲೆಂದರಲ್ಲಿ ಕಸ ಬಿಸಾಡುವುದಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ಪ್ರತಿದಿನ ಕೆರೆಯಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿರುವುದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು, ಶುಕ್ರವಾರ ದಿಢೀರ್ ಕಾರ್ಯಾಚರಣೆ ಕೈಗೊಂಡರು. ಹಲವರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿದರು.ಕಂದವಾರ ಕೆರೆ ಬಾಪೂಜಿ ನಗರ, ಗಂಗನಮಿದ್ದೆ ಬಡಾವಣೆ, ಕಂದವಾರ ಗ್ರಾಮ, ಕಂದವಾರ ಬಾಗಿಲಿಗೆ ಹೊಂದಿಕೊಂಡಿದೆ. ಸುತ್ತಲಿನ ಹೋಟೆಲ್, ಅಂಗಡಿ ಸೇರಿ ಸ್ಥಳೀಯ ನಿವಾಸಿಗಳು ಕೆರೆ ಕೋಡಿ ಕಟ್ಟೆ, ಕೆರೆಯಂಗಳದಲ್ಲಿ ತ್ಯಾಜ್ಯ ಸುರಿಯುತ್ತಿದ್ದರು, ಅದರಲ್ಲೂ ಮಾಂಸದಂಗಡಿ ತ್ಯಾಜ್ಯ, ಕಟ್ಟಿಗೆ, ಪ್ಲಾಸ್ಟಿಕ್ ಸೇರಿ ನಿರುಪಯುಕ್ತ ವಸ್ತುಗಳೇ ಹೆಚ್ಚಿದ್ದವು.
ರಾಜಕಾಲುವೆಗಳ ಒತ್ತುವರಿಯಿಂದ ಕೆರೆಗೆ ನೀರು ಹರಿದು ಬರುವುದು ನಿಂತು, ತ್ಯಾಜ್ಯ ಎಸೆಯುವ ಸ್ಥಳವಾಗಿ ಬದಲಾದ ಕೆರೆಗೆ ಇತ್ತೀಚೆಗೆ ಬೆಂಗಳೂರಿನ ಹೆಬ್ಬಾಳ-ನಾಗವಾರ ವ್ಯಾಲಿಯ ತ್ಯಾಜ್ಯ ಸಂಸ್ಕರಿಸಿದ ನೀರು ಹರಿದು ಗತ ವೈಭವ ಮರುಕಳಿಸಿದೆ, ಆದರೆ ಜನರು ಈಗಲೂ ತ್ಯಾಜ್ಯ ಎಸೆಯುವ ಹಳೇ ಚಾಳಿ ಮಾತ್ರ ಬಿಟ್ಟಿಲ್ಲ.
ಕಾರ್ಖಾನೆಗಳು, ಆಸ್ಪತ್ರೆಗಳ ತ್ಯಾಜ್ಯ ಜತೆಗೆ ರಾಸಾಯನಿಕದಿಂದ ಮಿಶ್ರಣವಾಗಿರುವ ನೀರನ್ನು ಕೆರೆಗಳಿಗೆ ಹರಿಸುವುದರಿಂದ ಅಂತರ್ಜಲ ಕಲುಷಿತಗೊಳ್ಳುತ್ತದೆ ಎಂಬ ಆರೋಪಗಳು ಈಗಲೂ ಕೇಳಿಬರುತ್ತಿವೆ, ವೈಜ್ಞಾನಿಕವಾಗಿ ಶುದ್ಧೀಕರಿಸಿ ನೀರನ್ನು ಹರಿಸಲಾಗುತ್ತಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಈ ಗಲಾಟೆಯ ನಡುವೆಯೇ ಸ್ಥಳೀಯರು ಕೆರೆಗೆ ತ್ಯಾಜ್ಯ ಎಸೆಯುವುದು ತಲೆ ನೋವಾಗಿ ಪರಿಣಿಮಿಸಿದ್ದು ದಂಡ ವಿಧಿಸುವಿಕೆ ಮತ್ತು ನಿರ್ದಾಕ್ಷಿಣ್ಯ ಕ್ರಮದ ಮೂಲಕ ಕಡಿವಾಣ ಹಾಕಲಾಗುತ್ತಿದೆ.