

ಹೊನ್ನಾಳಿ: ಕನ್ನಡದ ನೆಲದಲ್ಲಿ ಜನ್ಮತಾಳಿದ ಸರ್.ಎಂ.ವಿಶ್ವೇಶ್ವರಯ್ಯ, ಕೆಂಗಲ್ ಹನುಮಂತಯ್ಯ, ಡಾ.ಎಸ್.ನಿಜಲಿಂಗಪ್ಪ, ಕಾರಂತ, ಬೇಂದ್ರೆ, ಮಾಸ್ತಿ, ಕುವೆಂಪು ಮತ್ತಿತರರು ನಮಗೆಲ್ಲ ಮೇಲ್ಪಂಕ್ತಿಯಾಗಿ ನಿಲ್ಲುತ್ತಾರೆ ಎಂದು ತಹಸೀಲ್ದಾರ್ ತುಷಾರ್ ಬಿ.ಹೊಸೂರು ಹೇಳಿದರು.
ಪಟ್ಟಣದ ಕನಕ ರಂಗ ಮಂದಿರದಲ್ಲಿ ಭಾನುವಾರ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಷ್ಟು ಸುದೀರ್ಘ ಇತಿಹಾಸವಿದೆ. ಕದಂಬರ ಕಾಲದ ಹಲ್ಮಿಡಿ ಶಾಸನವೇ ಇದಕ್ಕೆ ಜೀವಂತ ಸಾಕ್ಷಿ. ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆಗೆ ಸಾಧು ಸಂತರು, ಶಿವ ಶರಣರು, ಕವಿ ಪುಂಗವರು, ಸಾಹಿತಿಗಳ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ರಾಜ್ಯದ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದ್ದು ಅದರಲ್ಲಿ ನಮ್ಮ ಜಿಲ್ಲೆಯ ಡಾ.ಎಂ.ಜಿ.ಈಶ್ವರಪ್ಪ ಅವರು ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ ಎಂದರು.
ಜಯಚಾಮರಾಜೇಂದ್ರ ವೃತ್ತದಲ್ಲಿ ನಾಡ ಧ್ವಜಾರೋಹಣ ನೆರವೇರಿಸಿದ ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲ ಸಮುದಾಯಗಳ ಸಾಮರಸ್ಯ ಕಾಪಾಡಿಕೊಳ್ಳುವಲ್ಲಿ ಕರುನಾಡು ದೇಶದಲ್ಲೇ ಮುಂದಿದೆ. ನಾಡು, ನುಡಿ, ಜಲ ಹಾಗೂ ಸಂಸ್ಕೃತಿ ರಕ್ಷಣೆಗೆ ಪಣತೊಡೋಣ. ಬಸವಾದಿ ಪ್ರಮಥರು, ದಾಸ ಶ್ರೇಷ್ಠರು, ಸಂತರ ಮಾರ್ಗದರ್ಶನದಂತೆ ನಡೆದು ಬದುಕನ್ನು ಹಸನಾಗಿಸಿಕೊಳ್ಳೋಣ ಎಂದರು.