ಚಿತ್ರದುರ್ಗ:ಭಾರತೀಯ ಸಸ್ಯಗಳಲ್ಲಿ ಆರನೇ ಒಂದು ಭಾಗ ಔಷಧೀಯ ಗುಣಗಳನ್ನು ಹೊಂದಿವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆಯಿಂದ ನಗರದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ, ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದದ ಆವಿಷ್ಕಾರಗಳು ಮತ್ತು ಪರಿಸರ ರಕ್ಷಣೆ ಸಸ್ಯ ಹಾಗೂ ಪ್ರಾಣಿಗಳ ಸಂರಕ್ಷಣೆಯಲ್ಲಿ ಆಯುರ್ವೇದದ ಪಾತ್ರದ ಕುರಿತು ಮಾತನಾಡಿದರು.
ಅಳಿವಿನಂಚಿಗೆ ಸರಿಯುತ್ತಿರುವ ಈ ಅಮೂಲ್ಯವಾದ ಔಷಧೀಯ ಸಸ್ಯಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.
ಅಮೃತ ಆಯುರ್ವೇದ ಕಾಲೇಜಿನ ಡಾ.ವೀರೇಶ್ ಮಾತನಾಡಿ, ಆಯುರ್ವೇದ, ಸಸ್ಯ ಸಂಕುಲದೊಂದಿಗೆ ನೇರ ಸಂಬಂಧ ಹೊಂದಿದೆ. ಆಯುರ್ವೇದ ಪದ್ಧತಿ ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಜೆ.ಎನ್.ಕೋಟೆ ಆಯುಷ್ ಚಿಕಿತ್ಸಾಲಯದ ಆಡಳಿತ ವೈದ್ಯಾಧಿಕಾರಿ ಡಾ.ಪಿ. ವಿಜಯಲಕ್ಷ್ಮೀ, ಹಿರಿಯೂರು ತಾಲೂಕಿನ ಸೊಂಡೆ ಕೊಳ ಆಯುಷ್ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ನಾಗರಾಜ್ ನಾಯಕ್ ಮಾತನಾಡಿದರು.
ಬ್ರಹ್ಮಕುಮಾರಿ ರೋಹಿಣಿ, ರಶ್ಮಿ, ಅಮೃತಾ ಆಯುರ್ವೇದ ಕಾಲೇಜಿನ ಡಾ. ವೀರೇಶ್, ಆಯುಷ್ ಇಲಾಖೆ ಯೋಗ ತರಬೇತುದಾರ ರವಿ ಕೆ. ಅಂಬೇಕರ್ ಮತ್ತಿತರರು ಇದ್ದರು.